ಮಂಗಳೂರು: ಎಕ್ಸ್ ಪರ್ಟ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: 77 ನೇ ವರ್ಷದ ಸ್ವಾತಂತ್ರ್ಯೋತ್ಸವದ ವೈಭವದ ವಿಜಯೋತ್ಸವವನ್ನು ಗುರುತಿಸಲು ಸ್ವಾತಂತ್ರ್ಯ ದಿನಾಚರಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಅಮೇರಿಕಾದ ಅಡೋಬಿಯ ಪ್ರಿನ್ಸಿಪಾಲ್ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ಆಶಾ ಕಾಮತ್ ಅಭಿಪ್ರಾಯಪಟ್ಟರು.

ಮಂಗಳೂರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಶ್ರೀ ಭಗವತಿ ದೇವಸ್ಥಾನದ ಆವರಣದಲ್ಲಿ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.

ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ನಮಗೆ ನೂರಾರು ವರ್ಷಗಳು ಸಂದವು. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಆ ಮೂಲಕ ಎತ್ತಿಹಿಡಿಯಬೇಕಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ದೊರಕಿರುವ ಮೌಲ್ಯಗಳನ್ನು ದೇಶಕ್ಕಾಗಿ ಸಮರ್ಪಣೆ ಮಾಡಬೇಕು ಎಂದು ಹೇಳಿದರು.

ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ನಾವೆಲ್ಲರೂ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುತ್ತ ನಮ್ಮೆಲ್ಲರ ಕರ್ತವ್ಯ ಪ್ರಜ್ಞೆಯನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ದೇಶ ಸೇವೆಯನ್ನು ಮಾಡಬೇಕು
ಎಂದರು.

ಈ ಸಂದರ್ಭದಲ್ಲಿ ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ನಾವು ಭಾರತೀಯರು ಎನ್ನುವ ಬಗ್ಗೆ ನಮಗೆ ಹೆಮ್ಮೆ ಇರಬೇಕು. ರಾಷ್ಟ್ರೀಯತೆಯ ಮನೋಭಾವವನ್ನು ಅರ್ಥೈಸಿಕೊಳ್ಳುವ ಮೂಲಕ ರಾಷ್ಟ್ರಕ್ಕಾಗಿ ಜೀವನವನ್ನು ತ್ಯಾಗ ಮಾಡಿದ ಮಹಾನ್ ನಾಯಕರುಗಳ ಜೀವನಗಾಥೆಯು ನಮಗೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಮುಂಬೈನ ವಿವಿದ್ ಆರ್ಟ್ಸ್ ಮತ್ತು ಎಂಟಟೈನ್ಮಂಟ್ ನಿರ್ದೇಶಕ ಬಿ.ನರಹರಿ, ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್, ಯೋಗಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ಎಕ್ಸ್ಪರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ಸ್ವರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ರುಹಾನ್ ದರ್ಶಕ್ ಮತ್ತು ನಿಯತಿ ಶೆಣೈ, ಕಾತ್ಯಾಯಿನಿ ಕಾರ್ಯಕ್ರಮವನ್ನು ನಿರೂಪಿಸಿದರು.