ನದೆಹಲಿ: ಭಾರತ, ಪಾಕಿಸ್ತಾನದ ಮೇಲೆ ಆಪರೇಶನ್ ಸಿಂಧೂರ ನಡೆಸಿದ ಬೆನ್ನಲ್ಲೇ ದೇಶದಲ್ಲೇ ಇರುವ ಕೆಲವರು ಪಾಕಿಸ್ತಾನಕ್ಕೆ ಇಲ್ಲಿನ ರಹಸ್ಯ ಮಾಹಿತಿಗಳನ್ನು ನೀಡುತ್ತಿದ್ದಾರೆ ಎನ್ನುವ ಕುರಿತು ಶಂಕೆ ವ್ಯಕ್ತವಾಗಿತ್ತು. ಇದೀಗ ಅಂತದ್ದೇ ಪ್ರಕರಣದಲ್ಲಿ ಹರಿಯಾಣದ ಮಸ್ತ್ಗಢ ಚೀಕಾ ಗ್ರಾಮದ ಸ್ಥಳೀಯನನ್ನು ಬಂಧಿಸಲಾಗಿದೆ.
ಬಂಧಿಸಲ್ಪಟ್ಟ ಯುವಕನನ್ನು 25 ವರ್ಷದ ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಅಂದ ಹಾಗೆ ಈತ ಪಿಜಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾನೆ. ವಿಚಾರಣೆಯ ಸಮಯದಲ್ಲಿ ಅವನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕದಲ್ಲಿದ್ದಾಗ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಬಗ್ಗೆ ಆ ಸಂಸ್ಥೆಗೆ ಮಾಹಿತಿಯನ್ನು ನೀಡುವುದಾಗಿಯೂ ಅವನು ಹೇಳಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವೇಂದ್ರ ಸಿಂಗ್ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನಿ ಸೇನೆ ಮತ್ತು ಐಎಸ್ಐಗೆ ಕಾಲಕಾಲಕ್ಕೆ ರವಾನಿಸುತ್ತಿದ್ದ ಎಂದು ಡಿಎಸ್ಪಿ ಕೈಥಾಲ್ ವೀರಭನ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಕೈತಾಲ್ ಜಿಲ್ಲಾ ಪೊಲೀಸರಿಗೆ ಗುಪ್ತಚರ ಮಾಹಿತಿ ಬಂದಿತ್ತು; ಅದರ ಆಧಾರದ ಮೇಲೆ, ನಮ್ಮ ವಿಶೇಷ ಪತ್ತೇದಾರಿ ಸಿಬ್ಬಂದಿ ಮಸ್ತ್ಗಢ್ ಚೀಕಾ ಗ್ರಾಮದ ನಿವಾಸಿ ನರ್ವಾಲ್ ಸಿಂಗ್ ಅವರ ಪುತ್ರ ದೇವೇಂದ್ರನನ್ನು ಬಂಧಿಸಿದರು’ ಈತನ ಹಿಂದೆ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ ಎನ್ನುವ ಕುರಿತು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.












