ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ 2ನೇ ಹಂತದ ಯೋಜನೆಯಲ್ಲಿ (ಫೇಮ್–2) ದ್ಚಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಶೇಕಡ 50ರಷ್ಟು ಹೆಚ್ಚಿಸಿದೆ.
ಕೇಂದ್ರದ ನಿರ್ಧಾರದಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬೆಲೆಯು ಪೆಟ್ರೋಲ್ ಎಂಜಿನ್ ವಾಹನಗಳ ಆಸುಪಾಸಿಗೆ ಇಳಿಕೆ ಆಗಲಿದೆ’ ಎಂದು ವಿದ್ಯುತ್ ಚಾಲಿತ ವಾಹನಗಳ ತಯಾರಕರ ಸಂಘದ (ಎಸ್‌ಎಂಇವಿ) ಪ್ರಧಾನ ನಿರ್ದೇಶಕ ಸೋಹಿಂದರ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.
ನಗರ ಪ್ರದೇಶದಲ್ಲಿ ಬಳಸುವ ವಿದ್ಯುತ್ ಚಾಲಿತ ಸ್ಕೂಟರ್ ಬೆಲೆಯು ₹ 60 ಸಾವಿರಕ್ಕಿಂತಲೂ ಕಡಿಮೆ ಆಗಲಿದ್ದು, ಗರಿಷ್ಠ ವೇಗದ ಸ್ಕೂಟರ್‌ಗಳ ಬೆಲೆಯು ₹ 1 ಲಕ್ಷದ ಸಮೀಪಕ್ಕೆ ಬರಲಿದೆ’ ಎಂದು ಅವರು ವಿವರಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರಾಟ ಬೆಳವಣಿಗೆ ಕಂಡಿದೆ. ಸಬ್ಸಿಡಿಯನ್ನು ಶೇ 50ರಷ್ಟು ಹೆಚ್ಚಿಸುವ ಕೇಂದ್ರದ ನಿರ್ಧಾರದಿಂದ ಮಾರಾಟವು ಇನ್ನಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ. 2025ರ ವೇಳೆಗೆ 60 ಲಕ್ಷಕ್ಕೂ ಹೆಚ್ಚಿನ ವಾಹನಗಳ ಮಾರಾಟದ ಗುರಿ ತಲುಪುವ ಅಂದಾಜು ಇದೆ ಎಂದು ಏಥರ್ ಎನರ್ಜಿ ಕಂಪನಿಯ ಸಹ ಸ್ಥಾಪಕ ತರುಣ್ ಮೆಹ್ತಾ ಹೇಳಿದ್ದಾರೆ.