ಮಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇನಾಯತ್ ಅಲಿ: ಬಂಡಾಯದ ಸುಳಿವು ನೀಡಿದ ಬಾವ

ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬುಧವಾರದಂದು 5ನೇ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಬಾಕಿ ಉಳಿದಿದ್ದ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಭಾರೀ ಕುತೂಹಲ ಹುಟ್ಟಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಇನಾಯತ್ ಅಲಿ ಅವರನ್ನು ಇಳಿಸಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ ಇಬ್ಬರ ಮಧ್ಯೆ ಟಿಕೆಟ್ ಗಾಗಿ ಸ್ಪರ್ಧೆ ಏರ್ಪಟ್ಟಿದ್ದು, ಇದೀಗ ಕಾಂಗ್ರೆಸ್ ಹೈಕಮಾಂಡ್ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಿದೆ.

ಇನಾಯತ್ ಅಲಿ ಇಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.

ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವ ಕಾಂಗ್ರೆಸ್ ವಿರುದ್ದ ಬಂಡಾಯದ ಸುಳಿವು‌ ನೀಡಿದ್ದಾರೆ. ಕಾಂಗ್ರೆಸ್ ವಿರುದ್ದ ಗಂಭೀರ ಆರೋಪ ಮಾಡಿ ವೀಡೀಯೋ ಮಾಡಿದ್ದಾರೆ. ನನ್ನನ್ನು ಕಾಂಗ್ರೆಸ್ ಪಕ್ಷ‌ ಉಪಯೋಗಿಸಿ ಹಣದ ಆಸೆಗಾಗಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ನನ್ನ ಹೆಸರಿಗಾಗಿದ್ದ ಬಿ-ಫಾರಂ ಅನ್ನು ಎರಡು ಬಾರಿ ತಪ್ಪಿಸಲಾಗಿದೆ. ಇಂದು ಮಧ್ಯಾಹ್ನ 11 ಗಂಟೆಗೆ ಚೊಕ್ಕಬೆಟ್ಟಿನ ನನ್ನ ಮನೆಯಲ್ಲಿ ಬೆಂಬಲಿಗರ ಸಭೆ ಕರೆದಿದ್ದೇನೆ‌ ಎಂದಿದ್ದಾರೆ.

ಉಳಿದಂತೆ ರಾಯಚೂರು ನಗರಕ್ಕೆ ಮೊಹಮ್ಮದ್ ಶಾಲಮ್, ಶಿಡ್ಲಘಟ್ಟಕ್ಕೆ ಬಿ ವಿ ರಾಜೀವ್ ಗೌಡ, ಸಿ ವಿ ರಾಮನ್ ನಗರಕ್ಕೆ ಎಸ್ ಆನಂದ್ ಕುಮಾರ್, ಅರಕಲಗೂಡಿಗೆ ಎಚ್.ಪಿ. ಶ್ರೀಧರ್ ಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.