ಉಡುಪಿ: ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಯು ಎಂಜಿಎಂ ಕಾಲೇಜಿನ ಎದುರುಗಡೆ ಇರುವ ಶ್ರೀ ಗಣೇಶ್ ಬಿಲ್ಡಿಂಗ್ ನ ನೆಲಮಹಡಿಯಲ್ಲಿ ಸೆ.8 ರಂದು ಉದ್ಘಾಟನೆಯಾಯಿತು.
ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಸೊಸೈಟಿ ಉದ್ಘಾಟನೆ ನಡೆಸಿ ಮಾತನಾಡಿ, ಹೊಚ್ಚ ಹೊಸದಾಗಿ ಪ್ರಾರಂಭವಾಗಿರುವ ಸೊಸೈಟಿ ಸರ್ವ ಧರ್ಮೀಯರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಲಿ. ಹತ್ತು ಕೈಗಳು ಒಂದೇ ಮನಸ್ಸಿನಿಂದ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ. ಸಹಕಾರ ಕ್ಷೇತ್ರವು ಸಮಾಜದಲ್ಲಿನ ವಿವಿಧ ವ್ಯಕ್ತಿಗಳ ಮಧ್ಯೆ ಇರುವ ಸಾಮರಸ್ಯಕ್ಕೆ ಸಾಕ್ಷಿ. ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಂದ ಸಣ್ಣ ವ್ಯಾಪಾರಸ್ಥರಿಗೆ ಮತ್ತು ದುಡಿಯುವ ಕೈಗಳಿಗೆ ಅನುಕೂಲವಾಗಿ ಸಮಾಜದ ಅಭಿವೃದ್ದಿಗೆ ಕಾರಣವಾಗಲಿ ಎಂದರು.
ಬಳಿಕ ಸಂಸ್ಥೆಯ ವತಿಯಿಂದ ಯು.ಟಿ.ಖಾದರ್ ಅವರನ್ನು ಸನ್ಮಾನಿಸಲಾಯಿತು.
ಕಲ್ಯಾಣಪುರ ಮಿಲಾಗ್ರೀಸ್ ಕೆಥೆಡ್ರಲ್ ಚರ್ಚಿನ ಧರ್ಮಗುರು ಫಾ. ವಲೇರಿಯನ್ ಮೆಂಡೋನ್ಸಾ ಆಶೀರ್ವಚನ ನೀಡಿ ಶುಭಹಾರೈಸಿದರು.
ಅಮ್ಮುಂಜೆ ಸೈಂಟ್ ಅಂಟೋನಿ ಆರ್ಥೊಡಾಕ್ಸ್ ಸಿರಿಯನ್ ಚರ್ಚಿನ ಫಾ. ಲಾರೆನ್ಸ್ ಡೇವಿಡ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.
ರಾಜ್ಯ ಸಹಕಾರಿ ಯೂನಿಯನ್ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ ಮುಖ್ಯ ಕಚೇರಿಯನ್ನು ಉದ್ಘಾಟಿಸಿ ಅವಿಭಜಿತ ದ.ಕ ಜಿಲ್ಲೆಯು ವಾಣಿಜ್ಯ ಬ್ಯಾಂಕ್ ಗಳ ತವರೂರಾಗಿತ್ತು. ಇಂದು ಎಲ್ಲ ಬ್ಯಾಂಕ್ ಗಳು ವಿಲೀನಗೊಂಡಿದ್ದು, ಉಡುಪಿ ಸೊಸೈಟಿಯು ಸಿಂಡಿಕೇಟ್ ಹೆಸರನ್ನು ಉಳಿಸಿಕೊಂಡಿರುವುದು ಅಭಿನಂದನಾರ್ಹ ಎಂದರು.
ಕರ್ನಾಟಕ ಸ್ಟೇಟ್ ಸೌಹಾರ್ದ ಫೆಡರಲ್ ಕೋ-ಆಪರೇಟಿವ್ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ ಹಾಗೂ ಲಯನ್ಸ್ ಜಿಲ್ಲಾ 371ಸಿ ಗವರ್ನರ್ ನೇರಿ ಕರ್ನೇಲಿಯೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಸಂಸ್ಥಾಪಕ ಜೀವನ್ ಡಿ’ಸೋಜಾ ಸ್ವಾಗತಿಸಿದರು. ಮೆಲ್ವಿಟಾ ಪ್ರಾರ್ಥಿಸಿದರು. ಫೆಲ್ಸಿ ಡಿ’ಸೋಜಾ ಸನ್ಮಾನ ಪತ್ರ ವಾಚಿಸಿದರು. ಕುಮಾರ್ ವಂದಿಸಿದರು. ಶೈಲೇಶ್ ಹಲ್ದಿಪುರ್ ನಿರೂಪಿಸಿದರು.



















