ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ರೈತ ಸಮಾವೇಶ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ಜಿಲ್ಲಾ ರೈತ ಸಮಾವೇಶವು ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾರುಕಟ್ಟೆ, ರಸ್ತೆ ಹಾಗೂ ನೀರು ರೈತರಿಗೆ ಅತೀ ಅವಶ್ಯಕ. ಇವು ಮೂರು ಸಮರ್ಪಕವಾಗಿದ್ದರೆ, ಕೃಷಿಯಲ್ಲಿ ಹೆಚ್ಚು ಲಾಭಗಳಿಸಬಹುದು ಎಂದರು.
ಬೆಳೆಗಳ ಇಳಿಯುವರಿ ಬರುವ ಹೊತ್ತಿನಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರು ಕೃಷಿಯ ಮೇಲೆಯೇ ಹೆಚ್ಚು ಅವಲಂಬಿತರಾಗಿರುವುದರಿಂದ ಅವರೇ ನಿಜವಾದ ಹಿಂದುಳಿದ ವರ್ಗದವರು. ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಗಮನಹರಿಸಬೇಕು. ರೈತರ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕುಮ್ಕಿ‌ ಜಾಗ ರೈತರ ಹಕ್ಕು. ಅದನ್ನು ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರಿಂದ ಕುಮ್ಕಿ ಜಾಗವನ್ನು ಕಿತ್ತುಕೊಳ್ಳಲು ಆಗಲ್ಲ‌. ಕುಮ್ಕಿ ಹಕ್ಕು ರೈತರಿಗೆ ಸಿಕ್ಕಿದರೆ ಇನ್ನಷ್ಟು ಕೃಷಿ ಚಟುವಟಿಕೆ ಮಾಡಲು ಪ್ರೋತ್ಸಾಹ ನೀಡಲು ಸಾಧ್ಯ ಎಂದರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಶಾಸಕ ರಘುಪತಿ ಭಟ್, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಮ್ಯಾನೇಜರ್ ರಾಜಗೋಪಾಲ ಎಸ್., ರೋಟರಿಯ ಮಾಜಿ ಸಹಾಯಕ ಗವರ್ನರ್ ಮಂಜುನಾಥ ಉಪಾಧ್ಯ, ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ, ಕೋಶಾಧಿಕಾರಿ ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.