ಬೈಕಾಡಿ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಆಯೋಜಿಸಿದ್ದ “ರಂಗೋತ್ಸವ” ಕಾರ್ಯಕ್ರಮ ಉದ್ಘಾಟನೆ

ಬ್ರಹ್ಮಾವರ: ಮಂದಾರ(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ- ಬೈಕಾಡಿಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ “ರಂಗೋತ್ಸವ” ಕಾರ್ಯಕ್ರಮವು ಎ.8 ರಂದು ನಾದ ಮಣಿನಾಲ್ಕೂರು ಅವರ ಅರಿವಿನ ಹಾಡುಗಳೊಂದಿಗೆ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿಯವರು ನಾಟಕವೂ ಕೂಡ ಒಂದು ಮನೋಚಿಕಿತ್ಸೆಯೇ ಆಗಿದೆ ಮತ್ತು ಅದು ಶಿಸ್ತು ಹಾಗೂ ಬದ್ಧತೆಯಿಂದ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮತ್ತೋರ್ವ ಅಥಿತಿಗಳಾಗಿ ಆಗಮಿಸಿದ್ದ ರಂಗಭೂಮಿ ಉಡುಪಿಯ ಪ್ರದೀಪ್ ಚಂದ್ರ ಕುತ್ಪಾಡಿಯವರು ಗ್ರಾಮೀಣ ಭಾಗದಲ್ಲಿ ಮಂದಾರ ತಂಡ ನಾಟಕೋತ್ಸವದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಶ್ಲಾಘಿಸಿದರು.

ಇವರೊಂದಿಗೆ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಉತ್ಸಾಹಿ ತಂಡದೊಂದಿಗೆ ಜೊತೆಯಾಗಿರುತ್ತದೆ” ಎಂದು ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಭರವಸೆ ನೀಡಿದರು.

ತದನಂತರ ಮಂದಾರದ ಕಲಾವಿದರಿಂದ ಜಿ.ಎಸ್. ಭಟ್ಟ ಸಾಗರ ವಿರಚಿತ ರೋಹಿತ್.ಎಸ್.ಬೈಕಾಡಿ ಅವರ ನಿರ್ದೇಶನದ ‘ಕೊಳ್ಳಿ’ ನಾಟಕವು ಪ್ರದರ್ಶನಗೊಂಡಿತು.

ಈ ವೇಳೆ ಮಂದಾರದ ನಿರ್ದೇಶಕರಾದ ರೋಹಿತ್ ಎಸ್.ಬೈಕಾಡಿ, ಕಾರ್ಯದರ್ಶಿ ಪ್ರಸಾದ್ ಬ್ರಹ್ಮಾವರ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಸಚಿನ್ ಅಂಕೋಲಾ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.