ಉಡುಪಿ: ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಏನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ಗುರುವಾರ ನಗರದ ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಸಂಸ್ಥೆ (ಡಯಟ್) ಇಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾದ್ಯಕ್ಷೆ ನಿರುಪಮ ಪ್ರಸಾದ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಕರ್ತವ್ಯಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಎನ್.ಎಸ್.ಎಸ್ ನ ಪಾತ್ರ ದೊಡ್ಡದು.
ಇಂದಿನ ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ಪ್ರಾಂಶುಪಾಲ ಅಶೋಕ್ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ನಿರಂತರವಾಗಿರಬೇಕು, ಸ್ವಚ್ಛತೆ ಹೊರಗಷ್ಟೇ ಅಲ್ಲ, ನಮ್ಮ ಮನಸ್ಸನ್ನು ಸ್ವಚವಾಗಿರಿಸಿಕೊಳ್ಳಬೇಕು, ಅದಕ್ಕಾಗಿ ಯುವಜನತೆ ಜಾತಿ, ಮತ, ಬೇಧಗಳನ್ನು, ಮರೆತು ಒಗ್ಗಟ್ಟಾಗಿರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಮಾತನಾಡಿ, ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಪೋಷಿಸುವಲ್ಲಿ ಪರಿಣಾಮಕಾರಿ ವೇದಿಕೆಯಾಗಿದೆ. ಇಂತಹ ಚಟುವಟಿಕೆಗಳಿಂದ ಯುವಶಕ್ತಿ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ದಿನೇಶ್ ಹಿಂಬಾಳೆ ಮಾತನಾಡಿ, ಎನ್.ಎಸ್.ಎಸ್ ನಿಂದ ಮಾನವೀಯ ಮೌಲ್ಯಗಳ ವಿಕಸನ ಸಾಧ್ಯ. ಸೇವಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಉತ್ತಮ ನಾಗರೀಕರಾಗಿ ಹೊರಹೊಮ್ಮುತ್ತಾರೆ ಎಂದರು.
ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಇಂದಿರಾ ಮಾತನಾಡಿದರು ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶುಭಗೀತಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಉಪನ್ಯಾಸಕ ಗಂಗಾಧರ್ ವಿ.ಎ. ನಿರೂಪಿಸಿ, ಉಪನ್ಯಾಸಕಿ ಪ್ರೇಮಾ.ಬಿ ವಂದಿಸಿದರು.
ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ಉಷಾ, ಡಯಟ್‌ನ್ ಹಿರಿಯ ಉಪನ್ಯಾಸಕ ಸುರೇಂದ್ರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ ಶ್ರೀಲತಾ, ಕಾಲೇಜಿನ ಉಪನ್ಯಾಸಕರು, ಎನ್.ಎಸ್.ಎಸ್ ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















