ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ನೂತನ ಸಭಾಭವನ ಹಾಗೂ ಗೋದಾಮು ಉದ್ಘಾಟನೆ

ಉಡುಪಿ: ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಸಂಪೂರ್ಣ ಹವಾನಿಯಂತ್ರಿತ ನೂತನ ಸಭಾಭವನ, ಆಡಳಿತ ಕಚೇರಿ ಮತ್ತು ಗೋದಾಮು ಕಟ್ಟಡವನ್ನು ದ‌.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಭಾನುವಾರದಂದು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಅವರು ನೂತನ ನವೋದಯ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಚೈತನ್ಯ ವಿಮಾ ಪರಿಹಾರವನ್ನು ವಿತರಿಸಿ ಮಾತನಾಡಿ, ರಾಜ್ಯಗಳಿಗೆ ಸೀಮಿತವಾಗಿದ್ದ ಸಹಕಾರ ಕ್ಷೇತ್ರವನ್ನು ಕೇಂದ್ರೀಕೃತಗೊಳಿಸಲು ಉದ್ದೇಶಿಸಿರುವ ಕೇಂದ್ರ ಸರಕಾರದ ಚಿಂತನೆಯಂತೆ ಸಹಕಾರಿ ಕ್ಷೇತ್ರವನ್ನು ಕೇವಲ ಕೃಷಿ ಪತ್ತಿನ ಸಂಘಕ್ಕೆ ಸೀಮಿತಗೊಳಿಸದೆ ವಿವಿಧೋದ್ದೇಶ ಸಹಕಾರಿ ಸಂಸ್ಥೆಯಾಗಿ ಬೆಳೆಸುವ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ತಲೆ ಎತ್ತಿರುವ ಸುಂದರ ಸಭಾಭವನವು ಸ್ಥಳೀಯರ ಅವಶ್ಯಕತೆಗಳನ್ನು ಪೂರೈಸಲಿದೆ ಎಂದರು.

ತನ್ನ ಗ್ರಾಹಕ ಸ್ನೇಹಿ ವ್ಯವಹಾರದ ಮೂಲಕ ಸ್ಥಳೀಯರ ಅಗತ್ಯಗಳಿಗೆ ಸುಲಭವಾಗಿ ಒದಗಿ ಬರುವುದು ಸಹಕಾರಿ ಬ್ಯಾಂಕ್ ಗಳು ಹೊರತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲ. ಉಡುಪಿ ಜಿಲ್ಲೆಯ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳು ಇಂದು ಬೇರೆ ಬ್ಯಾಂಕ್ ಗಳೊಂದಿಗೆ ವಿಲೀನಗೊಂಡು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್ ಗಳು ಸಂಕುಚಿತಗೊಳ್ಳುತ್ತಿದ್ದರೆ ಸಹಕಾರಿ ಬ್ಯಾಂಕ್ ಗಳು ವಿಕಸನಗೊಳ್ಳುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ರಾಜೇಶ್ ರಾವ್ ಮಾತನಾಡಿ, ಹಿರಿಯರು ಕಟ್ಟಿ ಬೆಳೆಸಿರುವ ಸಂಸ್ಥೆಯು ಎಲ್ಲರ ಸಹಕಾರದಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿಕೊಂಡು ಬೆಳೆಯುತ್ತಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ಸೇವೆ ನೀಡುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ಯುವಕರಿಗೆ ಜವಾಬ್ದಾರಿ ವಹಿಸುವ ಮೂಲಕ ಹೆಚ್ಚಿನ ಯಶಸ್ಸು ಸಾಧ್ಯ ಎಂಬುದನ್ನು ಡಾ‌. ರಾಜೇಂದ್ರ ಕುಮಾರ್ ತೋರಿಸಿಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ರಾಜೇಶ್ ರಾವ್ ಪಾಂಗಾಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಶೆಟ್ಟಿ, ನಿವೃತ್ತ ಹಿರಿಯ ಸಿಬ್ಬಂದಿ ಗೋಪಾಲಕೃಷ್ಣರಾವ್ ಅವರನ್ನು ಸನ್ಮಾನಿಸಲಾಯಿತು.

ನೂತನ ಗೋದಾಮು ಕಟ್ಟಡ ಹಾಗೂ ಕೊಠಡಿ, ಆಡಳಿತ ಕಚೇರಿ, ವಿಶ್ರಾಂತಿ ಕೊಠಡಿ, ವಾಹನ ನಿಲುಗಡೆ ಸ್ಥಳ ಹಾಗೂ ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಸಂಘಗಳ ಕುಂದಾಪುರ ವಿಭಾಗದ ಸಹಾಯಕ ನಿಬಂಧಕ ಅರುಣ್ ಕುಮಾರ್ ಮತ್ತು ಉಡುಪಿ ಸಾಯಿರಾಧ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಹರ ಶೆಟ್ಟಿ, ಇನ್ನಂಜೆ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಆಚಾರ್ಯ, ಕುರ್ಕಾಲು ಗ್ರಾಪಂ ಅಧ್ಯಕ್ಷ ಮಹೇಶ ಶೆಟ್ಟಿ ಬಿಳಿಯಾರು, ದ.ಕ. ಜಿ.ಕೇ‌.ಸ.ಬ್ಯಾಂಕ್ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಉಡುಪಿ ತಾಲೂಕು ಸ್ವ ಸಹಾಯಕ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ. ಸುಧೀರ್ ಕುಮಾರ್, ಶಿರ್ವ ಸಿಎ ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಕೆಮ್ಮಣ್ಣು ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಶೆಟ್ಟಿ, ಕಟಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ್ ಭಾಗವಹಿಸಿದ್ದರು.

ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವೈಶಾಲಿ ಶೆಟ್ಟಿ, ನಿರ್ದೇಶಕರಾದ ಪ್ರಕಾಶ್ ಶೆಟ್ಟಿ, ಪಿ.ಎನ್. ನಾಗೇಶ್ ರಾವ್, ಪೆನ್ವೆಲ್ ಸೋನ್ಸ್, ಅಂಗರ ಪೂಜಾರಿ, ಶೋಭಾ ಪೂಜಾರ್ತಿ, ಶಕುಂತಳ, ಡಾಲ್ಫಿ ಪಿರೇರ, ವಾಸು, ಸದಾಶಿವ ಭಟ್ ದ.ಕ.ಜಿ.ಕೇ.ಸ. ಬ್ಯಾಂಕ್ ವಲಯ ಮೇಲ್ವಿಚಾರಕ ಬಾಲಕೃಷ್ಣ ಭಟ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಇನ್ನಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ರಾಜೇಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ವಂದಿಸಿದರು. ಪ್ರವೀಣ್ ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು.