ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆ ಉದ್ಘಾಟನೆ

ಉಡುಪಿ: ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಉಡುಪಿ ಶಾಖೆ ಉಡುಪಿ-ಕಲ್ಸಂಕ ಮುಖ್ಯ ರಸ್ತೆಯ ಶಂಕರನಾರಾಯಣ ದೇವಸ್ಥಾನದ ಸಮೀಪದ ಅಜೇಯ್ ಟವರ್ಸ್ ನಲ್ಲಿ ಇಂದು ಶುಭಾರಂಭಗೊಂಡಿತು.

ಗೋವಾ ಕವಳೇ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹರಾಜ್ ಅವರು ಸೊಸೈಟಿಯ ಉಡುಪಿ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶ್ರದ್ಧೆ, ಭಕ್ತಿಭಾವದಿಂದ ದೇವರನ್ನು ಆರಾಧಿಸುವವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ಅದರಂತೆ ಈ ಸಂಸ್ಥೆ ಸಹ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದೊಂದಿಗೆ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಿ, ಮತ್ತಷ್ಟು ಜನರಿಗೆ ಸೇವೆ ನೀಡುವಂತಾಗಲಿ ಎಂದು ಶುಭಕೋರಿದರು.

ಯಾವುದೇ ಒಂದು ಸಂಸ್ಥೆ ಆರ್ಥಿಕ ಅಭಿವೃದ್ಧಿ ಸಾಧಿಸಬೇಕಾದರೆ ಗ್ರಾಹಕರ ವಿಶ್ವಾಸ ಗಳಿಸುವುದು ಮುಖ್ಯ. ಅದರಂತೆ ಈ ಸೊಸೈಟಿ ಕೂಡ ಗ್ರಾಹಕರ ವಿಶ್ವಾಸಗಳಿಸಿಕೊಂಡು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಮಾತನಾಡಿ, ಪರ್ಕಳ ಎಂಬ ಸಣ್ಣಗ್ರಾಮದ ಆರಂಭಗೊಂಡ ಸೊಸೈಟಿಯು ಇದೀಗ ಆರು ಶಾಖೆಗಳೊಂದಿಗೆ ಯಶಸ್ಸಿನ ಕಡೆಗೆ ಮುನ್ನಡೆಯುತ್ತಿದೆ. ರಾಷ್ಟ್ರೀಯಕೃತ ಹಾಗೂ ಖಾಸಗಿ ಬ್ಯಾಂಕ್ ಗಳ ಜತೆ ಆರೋಗ್ಯಕರ ಪೈಪೋಟಿ ನಡೆಸಿ ಉತ್ತಮ ಸಾಧನೆ ತೋರುವಂತಾಗಲಿ. ಸ್ವಂತ ಕಟ್ಟಡಗಳನ್ನು ಹೊಂದಿ ಇನ್ನಷ್ಟು ಅಭಿವೃದ್ಧಿ ಸಾಧಿಸುವಂತಾಗಲಿ ಎಂದು ಹಾರೈಸಿದರು.

ನಗರಸಭಾ ಸದಸ್ಯೆ ಮಾನಸಿ ಪೈ, ಮಣಿಪಾಲ ಆರ್ ಎಸ್ ಬಿ ಸಂಘದ ಅಧ್ಯಕ್ಷ ಗೋಕುಲದಾಸ್ ನಾಯಕ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ಎಂ.ಎಚ್. ವಿಠಲ ಶೇರಿಗಾರ್, ಗೀತಾಂಜಲಿ ಸಿಲ್ಕ್ಸ್ ನ ಮಾಲೀಕ ರಾಮಕೃಷ್ಣ ನಾಯಕ್, ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ. ರಾಮಕೃಷ್ಣ ನಾಯಕ್ ಪರ್ಕಳ, ಸಂತೋಷ್ ವಾಗ್ಲೆ, ಶ್ರೀಶ ನಾಯಕ್ ಪೆರ್ಣಂಕಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ನರಸಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, 2001ರಲ್ಲಿ ಉಡುಪಿ ಜಿಲ್ಲೆಯ ಪರ್ಕಳದ ಸಣ್ಣ ಪರಿಸರದಲ್ಲಿ ಆರಂಭಗೊಂಡ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19 ಸಂವತ್ಸರಗಳನ್ನು ಪೂರೈಸಿ ವಿಶಂತಿ ವರ್ಷಾಚರಣೆಯ ಹಾದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಇಂದು ಉದ್ಘಾಟನೆಗೊಂಡ ನೂತನ ಶಾಖೆಯು ಉಡುಪಿ ಜನತೆಗೆ ಸೇವೆಯನ್ನು‌ ನೀಡಲಿದೆ ಎಂದರು.

ಪರ್ಕಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಹೆದ್ದಾರಿ ಪಕ್ಕದಲ್ಲಿ 20 ಸೆಂಟ್ಸ್ ಜಾಗವನ್ನು ಸೊಸೈಟಿ ಖರೀದಿಸಿದೆ. ಮುಂದಿನ ದಿನಗಳಲ್ಲಿ ಆ ಸ್ಥಳದಲ್ಲಿ ಕಟ್ಟಡವನ್ನು‌ ನಿರ್ಮಾಣ ಮಾಡಲಿದೆ. ಬಳಿಕ ಪ್ರಧಾನ ಕಚೇರಿ ಅಲ್ಲಿಗೆ ಸ್ಥಳಾಂತರವಾಗಲಿದೆ ಎಂದು ತಿಳಿಸಿದರು.

ಸೊಸೈಟಿ ಬಂಟಕಲ್ಲು, ಹಿರಿಯಡಕ, ಮಣಿಪಾಲ, ಕುಕ್ಕೆಹಳ್ಳಿಗಳಲ್ಲಿ‌ ಶಾಖೆಗಳನ್ನು ಒಳಗೊಂಡಿದೆ. ಆ ಪೈಕಿ ಮೂರು ಶಾಖೆಗಳು ಸ್ವಂತ ಕಟ್ಟಡದಲ್ಲಿದ್ದು, ಎರಡು ಶಾಖೆಗಳು ಬಾಡಿಗೆ ಕಟ್ಟಡದಲ್ಲಿದೆ.

ಗ್ರಾಹಕರಿಗೆ ವಿಶೇಷ ಸೌಲಭ್ಯ:
ಸೊಸೈಟಿಯು ಅತ್ಯಾಧುನಿಕ ಬ್ಯಾಂಕಿಂಗ್ ವ್ಯವಸ್ಥೆಗಳಾದ ಕೋರ್ ಬ್ಯಾಂಕಿಂಗ್ ಮೊವಾಯಿಲ್ ಆ್ಯಪ್ ನಂತಹ ತಂತ್ರಜ್ಞಾನವನ್ನು ಹೊಂದಿದೆ. ಸದಸ್ಯರಿಗೆ ಉತ್ಕೃಷ್ಟ ಸೇವೆಯನ್ನು ನೀಡುತ್ತಿದೆ ಎಂದರು.

₹1.28 ಕೋಟಿ ನಿವ್ವಳ ಲಾಭ:
ಸೊಸೈಟಿ ₹69 ಕೋಟಿಗೂ ಅಧಿಕ ಠೇವಣಿ ಹೊಂದಿದ್ದು, ₹53 ಕೋಟಿಗೂ ಅಧಿಕ ಸಾಲ ವಿತರಣೆ ಮಾಡಿದೆ. ₹ 1.28 ಕೋಟಿ ನಿವ್ವಳ ಲಾಭಗಳಿಸಿದೆ. ಅಡಿಟ್ ನಲ್ಲಿ ಎ ಶ್ರೇಣಿಗಳಿಸಿದ ಸಹಕಾರಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ನಗರಸಭೆಯ ಮಾಜಿ ಸದಸ್ಯ ನರಸಿಂಹ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.