ಉಡುಪಿ: ಜಿಲ್ಲೆಯ ಪರ್ಕಳದ ಹೆರ್ಗ ಗ್ರಾಮದಲ್ಲಿರುವ ನಾರಾಯಣಗುರು ರಸ್ತೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ವತಿಯಿಂದ ಏಪ್ರಿಲ್ 4 ಮತ್ತು 5ರಂದು ಬ್ರಹ್ಮಶ್ರೀ ನಾರಾಯಣಗುರು ಮಂದಿರದ 17ನೇ ವಾರ್ಷಿಕ ವರ್ಧಂತಿ, ನವೀಕೃತ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೂತನ ಬ್ರಹ್ಮಶ್ರೀ ನಾರಾಯಣಗುರು ಆಡಿಟೋರಿಯಂ ಉದ್ಘಾಟನಾ ಕಾರ್ಯಕ್ರಮ ಜರಗಲಿದೆ. ಎರಡು ದಿನಗಳ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 4ರಂದು ಸಂಜೆ 6.30ಕ್ಕೆ ವಾಸ್ತು ಹೋಮದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ನಂತರ ಗೋ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 5ರಂದು ಬೆಳಿಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ಮತ್ತು ನಂತರ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಮೇಲ್ಮನೆ ಹೆರ್ಗ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ,ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಭಾಗವಹಿಸಲಿದ್ದಾರೆ.
ಸಮಾಜದಲ್ಲಿ ಧಾರ್ಮಿಕ ಚೈತನ್ಯವ ವೃದ್ಧಿಸುವುದು ಹಾಗೂ ಶ್ರೀ ನಾರಾಯಣಗುರುಗಳ ತತ್ವಗಳನ್ನು ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.




















