ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರವನ್ನು ₹ 1,300-1,400 ಕೋಟಿ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಜನರಿಂದ ನಿಧಿ ಸಂಗ್ರಹ ಮಾಡುವ ಮೂಲಕ ಹಣ ಹೊಂದಿಸಲಾಗುವುದು. ಈ ನಿಧಿ ಸಂಗ್ರಹ ಅಭಿಯಾನ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ವಿಶ್ವ ಹಿಂದು ಪರಿಷತ್ ಉಸ್ತುವಾರಿಯಲ್ಲಿ ನಡೆಯಲಿದೆ. ಹಾಗಾಗಿ ಹಣದ ದುರುಪಯೋಗಕ್ಕೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಟ್ರಸ್ಟ್ನ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೇಜಾವರ ಮಠದ ಬಳಿಯ ವಿಜಯಧ್ವಜದಲ್ಲಿ ಇಂದು ಅಯೋಧ್ಯೆ ಶ್ರೀರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಉಡುಪಿ ಜಿಲ್ಲಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಮಕರ ಸಂಕ್ರಾಂತಿಯ ನಂತರ ನಿಧಿ ಸಂಗ್ರಹ ಅಭಿಯಾನ ನಡೆಯಲಿದ್ದು, ವಿಹಿಂಪ ಕಾರ್ಯಕರ್ತರು ನಿಧಿ ಸಂಗ್ರಹ ಮಾಡಲಿದ್ದಾರೆ. ಒಟ್ಟು 45 ದಿನಗಳ ಕಾಲ ಈ ಅಭಿಯಾನ ನಡೆಯುತ್ತದೆ. ಕಾರ್ಯಕರ್ತರು ದೇಶದ ಮೂಲೆ ಮೂಲೆಯ ಗ್ರಾಮಗಳಲ್ಲಿ ಮನೆಗಳನ್ನು ಸಂಪರ್ಕ ಮಾಡುತ್ತಾರೆ. ಕಾರ್ಯಕರ್ತರು ಬಂದಾಗ ಮಾತ್ರ ಹಣ ಕೊಡಿ, ಇಲ್ಲವೇ ನೇರವಾಗಿ ಟ್ರಸ್ಟ್ನ ಅಕೌಂಟಿಗೆ ಹಣ ಜಮಾ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪ್ರತಿಯೊಬ್ಬ ಕನಿಷ್ಠ 10 ರೂ. ನೀಡಬಹುದು. ಹತ್ತು ರೂ. ದೇಣಿಗೆಗೂ ಕೂಪನ್ ಮಾಡಲಾಗಿದೆ. ಮನೆಗೊಂದರಂತೆ 100 ರೂ. ನೀಡಬಹುದು ಎಂದರು.