ಎಲ್ಲರಿಗಾಗಿ ಉಚಿತ ಆರೋಗ್ಯ ಸೇವೆ ಯೋಜನೆಯಡಿ ನಮ್ಮ ಕ್ಲಿನಿಕ್ ಗಳ ಉದ್ಘಾಟನೆ

ಉಡುಪಿ: ಬುಧವಾರದಂದು ಬೀಡಿನಗುಡ್ಡೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಉಡುಪಿ ಇವರ ಸಹಯೋಗದಲ್ಲಿ ನಮ್ಮ ಕ್ಲಿನಿಕ್ ನ ಉದ್ಘಾಟನೆ ನಡೆಯಿತು.

ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ನಮ್ಮ ಕ್ಲಿನಿಕ್ ಜನಸ್ನೇಹಿ, ಜನೋಪಯೋಗಿ ಆರೋಗ್ಯ ಸೇವೆ ಒದಗಿಸಬೇಕು. ನಗರ ಪ್ರದೇಶ ವ್ಯಾಪ್ತಿಯಲ್ಲಿ ಬಡಜನರನ್ನೊಳಗೊಂಡಂತೆ ಎಲ್ಲರಿಗೂ ಆರೋಗ್ಯ ಸೇವೆಯನ್ನು ಸರಳವಾಗಿ ಪಡೆಯಲು ಅನುಕೂಲವಾಗುವ ಉದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ನೆಲೆಸಿರುವ ಬಡ ಮತ್ತು ವಲಸೆ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದ್ದು, ಇದರಲ್ಲಿ ಸಾರ್ವಜನಿಕರಿಗೆ ಅತ್ಯಂತ ಅಗತ್ಯವಿರುವ 13 ವಿವಿಧ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುವುದು. ಇದರಿಂದ ಬಡ ಮತ್ತು ವಲಸೆ ಕಾರ್ಮಿಕರು ತಾವು ವಾಸಿಸುವ ಪ್ರದೇಶದಲ್ಲಿಯೇ ಉತ್ತಮ ಗುಣಮಟ್ಟದ ಉಚಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಲಿದ್ದು, ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಶುಲ್ಕ ನೀಡುವುದು ತಪ್ಪಲಿದೆ. ನಗರ ಪ್ರದೇಶದ ಸಾರ್ವಜನಿಕರೂ ಸಹ ಈ ಕ್ಲಿನಿಕ್‌ಗಳ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, 20,000 ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌ಗಳನ್ನು
ಆರಂಭಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಉಡುಪಿಯಲ್ಲಿ 3, ಕುಂದಾಪುರದಲ್ಲಿ 2 ಹಾಗೂ ಕಾರ್ಕಳದಲ್ಲಿ 1 ಸೇರಿದಂತೆ ಒಟು 6 ಕ್ಲಿನಿಕ್ ಆರಂಭಗೊಳ್ಳಲಿದೆ. ಇದರಿಂದ ಸಾರ್ವಜನಿಕರಿಗೆ ತಮ್ಮ ವಾಸಸ್ಥಳದ ಸಮೀಪದಲ್ಲಿಯೇ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ. ನಮ್ಮ ಕ್ಲಿನಿಕ್ ಅನ್ನು ಸಾರ್ವಜನಿಕರು ನನ್ನ ಕ್ಲಿನಿಕ್ ಎಂದು ಭಾವಿಸಿ, ಉಪಯೋಗ ಪಡೆದುಕೊಳ್ಳಬೇಕು ಎಂದ ಅವರು, ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಎಚ್ಚವಹಿಸಬೇಕೆಂದರು.

ನಗರಸಭಾ ಸದಸ್ಯ ಗಿರೀಶ್ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕೆಂಬ ಹಿನ್ನೆಲೆ, ನಮ್ಮ ಕ್ಲಿನಿಕ್ ಅನ್ನು ಸರ್ಕಾರ ಪ್ರಾರಂಭಿಸಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರಸಭೆ ಸದಸ್ಯೆ ರಜನಿ ಹೆಬ್ಬಾರ್, ಆರೋಗ್ಯ ಇಲಾಖೆಯ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು. ಜಿಲ್ಲಾ
ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾದ್ಯಾಯ ವಂದಿಸಿದರು.

ನಗರಸಭಾ ವ್ಯಾಪ್ತಿಯ ನಿಟ್ಟೂರು ಹಾಗೂ ಕಕ್ಕುಂಜೆಯಲ್ಲಿ ಪ್ರಾರಂಭವಾದ ನಮ್ಮ ಕ್ಲಿನಿಕ್‌ಗಳ ಉದ್ಘಾಟನೆಯನ್ನು ನಗರಸಭೆಯ ಅಧ್ಯಕ್ಷರು ಹಾಗೂ ಸ್ಥಳೀಯ ನಗರಸಭಾ ಸದಸ್ಯರುಗಳು ನೆರವೇರಿಸಿದರು.