ಡಿ.11 ರಂದು ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಸಭಾಭವನ ಹಾಗೂ ಗೋದಾಮು ಉದ್ಘಾಟನೆ

ಕೋಟ: ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಸಭಾಭವನ, ಸೇವಾಕೇಂದ್ರ ಹಾಗೂ ಗೋದಾಮು ಉದ್ಘಾಟನೆಯು ಡಿ. 11 ರಂದು ಜರಗಲಿದೆ.

ಕಾರ್ಯಕ್ರಮವನ್ನು ದ.ಕ.ಜಿ.ಕೇ.ಸ. ಬ್ಯಾಂಕ್ ನ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ . ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಡಿತರ ಗೋದಾಮು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ‘ಬಿ.ಸಿ. ಹೊಳ್ಳ’ಸಹಕಾರ ಸಭಾಭವನ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಸೇವಾ ಕೇಂದ್ರವನ್ನು, ವಿ.ಪ. ಸದಸ್ಯ ಮಂಜುನಾಥ ಭಂಡಾರಿ ‘ಸಕಲ’ ಮಾರಾಟ ಮಳಿಗೆಯನ್ನು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಿದ್ದಾರೆ.

ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಸುತ್ತು ನಿಧಿ ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ವಹಿಸಲಿದ್ದಾರೆ. ಕುಂದಾಪುರ ಸಹಕಾರ ಸಂಘಗಳ ನಿಬಂಧಕಿ ಲಾವಣ್ಯ ಕೆ.ಆರ್., ನಬಾರ್ಡ್ ಡಿ.ಡಿ.ಎಂ ಸಂಗೀತ ಕರ್ತ, ದ.ಕ.ಜಿ.ಸ. ಬ್ಯಾಂಕ್ ನಿರ್ದೇಶಕ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಶಿವರಾಮ್ ಉಡುಪ, ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಸಾಲಿಗ್ರಾಮ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್. ಕಾರಂತ ಹಾಗೂ ಕೋಟ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ದೇವಾಡಿಗ, ಸಿ.ಇ.ಒ. ಶರತ್ ಕುಮಾರ್ ಶೆಟ್ಟಿ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಭೀಷ್ಮ ವಿಜಯ’ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ತಿಳಿಸಿದ್ದಾರೆ.

ಕೋಟ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಮೃತ ಸದಸ್ಯನ ಸಾಲ ಒಂದು ತಿಂಗಳೊಳಗೆ ಸಂದಾಯ ಮಾಡಿದಲ್ಲಿ ಗರಿಷ್ಠ 2 ಲಕ್ಷ ರೂ. ರಿಯಾಯಿತಿ, ಸ್ವಸಹಾಯ ಸಂಘಗಳ ಸಾಲಗಾರರು ಮೃತ ಪಟ್ಟ ಒಂದು ತಿಂಗಳೊಳಗೆ ಸಂದಾಯ ಮಾಡಿದಲ್ಲಿ ಗರಿಷ್ಠ 50 ಸಾವಿರ ರೂ. ರಿಯಾಯಿತಿ ದೊರೆಯುತ್ತದೆ. ಇದಲ್ಲದೆ ರೈತ ಸದಸ್ಯರ ಮಕ್ಕಳ ಕೃಷಿ ಕ್ಷೇತ್ರದ ಉನ್ನತ ವ್ಯಾಸಂಗಕ್ಕೆ ಕೃಷಿ ಆವರ್ತನ ನಿಧಿ ಮೂಲಕ ಪ್ರೋತ್ಸಾಹ ಧನ, ರೈತ ಸದಸ್ಯರಿಗೆ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಕಟ್ಟಡ ಸಾಮಾಗ್ರಿಗಳು, ರಸ ಗೊಬ್ಬರ, ಬಿತ್ತನೆ ಬೀಜಗಳ ಪೂರೈಕೆಗೆ ನಿರ್ದಿಷ್ಟ ಅವಧಿಗೆ ನಿಬಡ್ಡಿ ಸಾಲ, ಸಂಘದ ಎಲ್ಲಾ ಶಾಖೆಗಳಲ್ಲೂ ಆರ್‌ಟಿಸಿ ವಿತರಣಾ ಕೇಂದ್ರ ಮತ್ತು ಇ ಸ್ಟ್ಯಾಂಪಿಂಗ್ ವಿತರಣ ಸೌಲಭ್ಯ, ಸದಸ್ಯರಿಗೆ ಅಡಿಕೆ ಮತ್ತು ತೆಂಗು ಸಸಿಗಳ ನರ್ಸರಿ ಮೂಲಕ ತೋಟಗಾರಿಕೆಗೆ ಉತ್ತೇಜನ ನೀಡಲಾಗುತ್ತದೆ. ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ಮತ್ತು ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆ ಸೇವೆ ಮತ್ತು ಕಾಮನ್ ಸಾಫ್ಟ್ ವೇರ್ ಅನುಷ್ಠಾನದಿಂದ ಸದಸ್ಯರಿಗೆ ಹೆಚ್ಚಿನ ಸೇವಾ ಸೌಲಭ್ಯ ದೊರೆಯುತ್ತಲಿದೆ. ಠೇವಣಿದಾರ ಗ್ರಾಹಕರಿಗೆ ಆಕರ್ಷಕ ಬಡ್ಡಿದರ ಸಂಘದ ವತಿಯಿಂದ ನೀಡಲಾಗುತ್ತಿದೆ.