ಉಡುಪಿ: ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರ ಇಲ್ಲಿನ ಐಕ್ಯೂಏಸಿ , ಕನ್ನಡ ವಿಭಾಗ, ಗ್ರಂಥಾಲಯ ಮತ್ತು ಉಡುಪಿ ಮಾಹಿತಿ ಕೇಂದ್ರ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2022ರ ಉದ್ಘಾಟನಾ ಕಾರ್ಯಕ್ರಮ, ಪುಸ್ತಕ ಪ್ರದರ್ಶನ ಮತ್ತು ರಾಜಾರಾಮ್ ಮೋಹನ್ ರಾಯ್ ರವರ 250 ನೇ ಜನ್ಮದಿನೋತ್ಸವ ಪ್ರಯುಕ್ತ ‘ಮಹಿಳಾ ಸಬಲೀಕರಣ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಸೋಮವಾರದಂದು ನಡೆಯಿತು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಮತ್ತು ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ತಲೆ ತಗ್ಗಿಸಿ ಪುಸ್ತಕ ಓದುವುದನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ತಲೆ ಎತ್ತಿ ಬದುಕುವುದನ್ನು ಕಲಿಯಬಹುದು. ಬಾಹ್ಯ ಶಿಸ್ತು ಎಷ್ಟು ಮುಖ್ಯವೋ ಆಂತರಿಕ ಶಿಸ್ತುಕೂಡ ಅಷ್ಟೇ ಮುಖ್ಯ , ಪುಸ್ತಕ ಓದುವ ಹವ್ಯಾಸ ಒಬ್ಬ ವ್ಯಕ್ತಿಯಲ್ಲಿ ಆಂತರಿಕ ಶಿಸ್ತನ್ನು ಬೆಳೆಸುತ್ತದೆ. ಬದಲಾವಣೆ ಜಗದ ನಿಯಮ ವೆಂಬಂತೆ ಉತ್ತಮ ಪುಸ್ತಕ ಓದಿನಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಚಿಂತನೆ, ಆಲೋಚನೆ ಹುಟ್ಟಿಕೊಳುತ್ತದೆ ಎಂದರು.
ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಡಾ. ರಾಮದಾಸ ಪ್ರಭು ಮಹಿಳಾ ಸಬಲೀಕರಣದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿ, ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಒಳಿತುಗಳನ್ನು ಸೇರಿಸಿ ಭಾರತದ ಮಹಿಳೆಯರಿಗೆ ಒಂದು ಭವಿಷ್ಯ ಕಟ್ಟುವ ಮೊದಲ ಪ್ರಯತ್ನ ಮಾಡಿದವರು ರಾಜಾ ರಾಮ್ ಮೋಹನ್ ರಾಯ್. ಭಾರತದ ಮೊದಲ ಪುರುಷ ಮಹಿಳಾವಾದಿಯಾಗಿ ಸಮಾಜ ಸುಧಾರಣೆಯ ಕೆಲಸ ಮಾಡಿದರು. ಸತಿ ಪದ್ಧತಿ , ಬಾಲ್ಯ ವಿವಾಹ ಇತ್ಯಾದಿ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಮಹಿಳೆಯರ ವಿದ್ಯಾಭ್ಯಾಸ, ವಿಧವಾ ಪುನರ್ವಿವಾಹಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರು ಎಂದರು.
ಏಸ್ ನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ. ವಾಣಿ ಬಲ್ಲಾಳ್ ಮತ್ತು ಗ್ರಂಥಪಾಲಕಿ ಶ್ರೀಮತಿ ಯಶೋದಾ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನಾ ಸ್ವಾಗತಿಸಿ , ಪ್ರಸ್ತಾವಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರವಿರಾಜ ಶೆಟ್ಟಿ ವಂದಿಸಿದರು. ದ್ವಿತೀಯ ಬಿ. ಎ ವಿದ್ಯಾರ್ಥಿನಿ ಕುಮಾರಿ ಅಮೃತ ನಿರೂಪಿಸಿದರು.