ಕೆಎಂಸಿ ಯಲ್ಲಿ 2023-24 ರ ಮೆಡ್ ಓರಿಯಂಟ್ ಎಂಬಿಬಿಎಸ್ ಬ್ಯಾಚ್ ಉದ್ಘಾಟನೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ (KMC) ಮೆಡ್‌ಓರಿಯಂಟ್ (MBBS ಬ್ಯಾಚ್ 2023-24 ರ ಓರಿಯಂಟೇಶನ್ ಪ್ರೋಗ್ರಾಂ) ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮಾತನಾಡಿ ವೈದ್ಯರು ಮತ್ತು ನಾಯಕರ ಮಹತ್ವವನ್ನು ತಿಳಿಸಿದರು. ಅವರು ವೈದ್ಯಕೀಯ ಕೌಶಲ್ಯಗಳು, ಸಮಯಪಾಲನೆ, ಬದ್ಧತೆ ಮತ್ತು ರೋಗಿಗಳ ಬಗ್ಗೆ ಸಮರ್ಪಣಾ ಭಾವ, ಅಧ್ಯಯನ ಮತ್ತು ಸಹೋದ್ಯೋಗಿಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ಹೇಳಿದರು.

ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಅವರು 2023-24 ನೇ ಸಾಲಿನ ವಿದ್ಯಾರ್ಥಿ ಕೈಪಿಡಿಯನ್ನು ಬಿಡುಗಡೆ ಮಾಡಿ ಕೆಎಂಸಿ ಮಣಿಪಾಲವನ್ನು ತಮ್ಮ ಕಲಿಕೆಯ ಸಂಸ್ಥೆಯಾಗಿ ಆಯ್ಕೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಅಸೋಸಿಯೇಟ್ ಡೀನ್ ಡಾ.ಅನಿಲ್ ಭಟ್ ಅವರು ಬಿಳಿ ಕೋಟ್‌ನ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಹೊಸ ವಿದ್ಯಾರ್ಥಿಗಳಿಗೆ ಚರಕ ಶಪಥ (ಪ್ರಮಾಣ) ಬೋಧಿಸಿ ವೈದ್ಯರ ನೈತಿಕ ಜವಾಬ್ದಾರಿಗಳನ್ನು ತಿಳಿಸಿದರು.

ಮಾಹೆಯ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್, ಡಾ.ಟಿ.ಎಂ.ಎ.ಪೈ ಅವರನ್ನು ಸ್ಮರಿಸುತ್ತಾ,
ಕೌಶಲ್ಯ ಶಿಕ್ಷಣದಲ್ಲಿ ಅವರ ಪ್ರವರ್ತಕ ಪ್ರಯತ್ನಗಳ ಬಗ್ಗೆ ಮಾತನಾಡಿದರು. ನೀಟ್‌ನಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಾದ ಡಾ. ರೇಹಾನ್ ಹಾಸನ ಮತ್ತು ಡಾ. ಮೆಹರ್ ಬ್ಯಾಟರಿವಾಲಾ ಅವರನ್ನು ಅಭಿನಂದಿಸಿದರು.

ನೀಟ್‌ನಲ್ಲಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಕೆಎಂಸಿ ಮಣಿಪಾಲದ ದಾರ್ಶನಿಕ ಸಂಸ್ಥಾಪಕ ಡಾ.ಟಿಎಂಎ ಪೈ ಅವರಿಗೆ ಪುಷ್ಪನಮನ ಸಲ್ಲಿಸಿದರು.

ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು ವಂದಿಸಿದರು. ಡಾ. ಸುಷ್ಮಾ ಪ್ರಭಾತ್ ಮತ್ತು ಡಾ. ಅನ್ನಾ ಡಿಸೋಜಾ ನಿರೂಪಿಸಿದರು.

ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ವಿದ್ಯಾರ್ಥಿಗಳು ಮಣಿಪಾಲದ ಎಂಡ್‌ಪಾಯಿಂಟ್ ನಲ್ಲಿ ಸಸಿಗಳನ್ನು ನೆಡುವ ಮೂಲಕ ಸಾಂಕೇತಿವಾಗಿ ತಮ್ಮ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಯಾಣವನ್ನು ಪ್ರಾಂಭಿಸಿದರು.