ಉಡುಪಿ: ಆರೋಗ್ಯವಂತ ದೇಹಕ್ಕೆ ರಕ್ತನಾಳಗಳು ಯಾವ ರೀತಿ ಅವಶ್ಯವೋ ಅದೇ ರೀತಿ ಸಮಾಜದಲ್ಲಿ ಸದೃಢ ಆರ್ಥಿಕ ವ್ಯವಸ್ಥೆಯ ನಿರ್ಮಾಣಕ್ಕೆ ನರನಾಡಿಯಂತೆ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಕೂಡಾ ಅವಶ್ಯ. ಕರಾವಳಿ ಜಿಲ್ಲೆಯಲ್ಲಿ ಶಿಸ್ತುಬದ್ಧ ಕಾರ್ಯವೈಖರಿಯಿಂದ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ನಿರಂತರ ಪ್ರಗತಿ ದಾಖಲಿಸುತ್ತಿರುವ ಮಹಾಲಕ್ಷ್ಮೀ ಬ್ಯಾಂಕ್ ಸಾಧನೆ ಅಭಿನಂದನಾರ್ಹ ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಉಡುಪಿ ಅಜ್ಜರಕಾಡಿನ ಕಲ್ಮಂಜೆ ಟವರ್ಸ್ ನಲ್ಲಿ ಮಹಾಲಕ್ಷ್ಮೀ ಬ್ಯಾಂಕಿನ ವಿಸ್ತರಿತ ಆಡಳಿತ ಕಚೇರಿಯ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.
ಆಡಳಿತ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ತಮ್ಮ ಬ್ಯಾಂಕಿನ ವತಿಯಿಂದ ಗೋಶಾಲೆಗೆ 2 ಲಕ್ಷ ರೂ ಮೊತ್ತವನ್ನು ನೀಡುವ ಮೂಲಕ ಯಶ್ ಪಾಲ್ ಸುವರ್ಣ ಗೋರಕ್ಷಣೆಯ ಬಗೆಗಿನ ತಮ್ಮ ಬದ್ಧತೆಯನ್ನು ನಿರೂಪಿಸಿದ್ದಾರೆ. ಸಮಾಜ ಮುಖಿ ಕಾರ್ಯಕ್ರಮಗಳ ಜೊತೆ ಜೊತೆಗೆ ಗೋರಕ್ಷಣೆಯ ಕಾರ್ಯಕ್ಕೆ ಶಕ್ತಿ ತುಂಬುವ ಮಹಾಲಕ್ಷ್ಮೀ ಬ್ಯಾಂಕ್ ಕಳಕಳಿ ಸರ್ವರಿಗೂ ಪ್ರೇರಣೆ ನೀಡಲಿ.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಾಲಕ್ಷ್ಮೀ ಬ್ಯಾಂಕ್ ನ ಸಾಧನೆ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದರು.
ನಾಡೋಜ ಡಾ ಜಿ. ಶಂಕರ್ ಮಾತನಾಡಿ, ಬ್ಯಾಂಕಿಂಗ್ ಸೇವೆಯೊಂದಿಗೆ ಬ್ಯಾಂಕಿನ ಸಾಮಾಜಿಕ ಬದ್ಧತೆಯ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಯಶ್ ಪಾಲ್ ಸುವರ್ಣರ ದಕ್ಷ ನೇತೃತ್ವದಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಮೂಡಿ ಬರಲಿ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ವಿಸ್ತರಿತ ಆಡಳಿತ ಕಚೇರಿಯ ಉದ್ಘಾಟನೆಯ ಪ್ರಯುಕ್ತ ಬ್ಯಾಂಕಿನ ವತಿಯಿಂದ ಪೇಜಾವರ ಮಠದ ನೀಲಾವರ ಗೋಶಾಲೆಗೆ 2 ಲಕ್ಷ ಮೊತ್ತದ ಚೆಕ್ಕನ್ನು ಪೇಜಾವರ ಶ್ರೀಗಳಿಗೆ ಯಶ್ ಪಾಲ್ ಸುವರ್ಣ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಸಹಕಾರಿ ಮುಖಂಡ ಬೆಳಪು ದೇವಿ ಪ್ರಸಾದ್ ಶೆಟ್ಟಿ, ಉದ್ಯಮಿಗಳಾದ ಜೆರ್ರಿ ವಿನ್ಸೆಂಟ್ ಡಯಾಸ್, ಪುರುಷೋತ್ತಮ ಶೆಟ್ಟಿ, ಮನೋಹರ್ ಎಸ್. ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಬಿಜೆಪಿ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕಿರಣ್ ಕುಮಾರ್ ಬೈಲೂರು, ಬ್ಯಾಂಕಿನ ಗ್ರಾಹಕರಾದ ಆನಂದ ಪಿ. ಸುವರ್ಣ, ಸಾಧು ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್, ಸುಭಾಷ್ ಮೆಂಡನ್, ರತ್ನಾಕರ ಸಾಲ್ಯಾನ್, ದಯಾನಂದ ಕುಂದರ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಹಾಗೂ ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.