ಬ್ರಹ್ಮಾವರ: ವಿಶಿಷ್ಟ ಕಲ್ಪನೆಯೊಂದಿಗೆ ಪ್ರಾರಂಭಗೊಂಡು, ಸವಿತಾ ಸಮಾಜಕ್ಕೆ ಅಗತ್ಯವಿರುವ ವಸ್ತುಗಳನ್ನು ಸಹಕಾರಿ ತತ್ತ್ವದಡಿ ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಬಿ. ಎಚ್. ಕೃಷ್ಣ ರೆಡ್ಡಿ ಹೇಳಿದರು.
ಅವರು ಮಂಗಳವಾರ ಬ್ರಹ್ಮಾವರ ಸೈಂಟ್ ಅಂತೋನಿ ಪ್ರೆಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಸವಿತಾ ಸಹಕಾರಿಯ 5ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಸಹಕಾರಿ ವ್ಯವಸ್ಥೆಯಡಿ ಸಾರಿಗೆ, ಇಂಧನ ವಿತರಣೆ ಸೇರ್ಪಡೆಯಾಗುತ್ತಿದೆ ಎಂದರು.
ಸಹಕಾರ ರಂಗದಲ್ಲಿ ಕೆಲವೇ ಸಂಸ್ಥೆಗಳು ಕಪ್ಪು ಚುಕ್ಕೆಯಾಗಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿವೆ. ಅವರ ವಿರುದ್ಧ ರಾಜ್ಯ ಸಂಯುಕ್ತ ಸಹಕಾರಿಯು ಕಾನೂನು ಕ್ರಮ ತೆಗೆದುಕೊಂಡು ಆಸ್ತಿಯನ್ನು ಮುಟ್ಟುಗೋಲು ಹಾಕಲಿದೆ. ತನ್ಮೂಲಕ ಸದಸ್ಯರಿಗೆ ಸೂಕ್ತ ನ್ಯಾಯ ನೀಡಲಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಮಣಿಪಾಲ ಮಾತನಾಡಿ, ಸವಿತಾ ಸೊಸೈಟಿಯು ಸದಸ್ಯರ ಅಭ್ಯುದಯಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಂಸ್ಥೆಯ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದರು.
ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಸ್ತಾವನೆಗೈದು, ಸಂಘಟನೆಯ ಮೂಲಕ ಇಂದು ಕ್ಷೌರಿಕ ವೃತ್ತಿಗೆ ಸೂಕ್ತ ಗೌರವ ದೊರೆತಿದೆ. ಈ ಮೂಲಕ ವೃತ್ತಿಬಾಂಧವರು ಸ್ವಾಭಿಮಾನದಿಂದ ಬದುಕುವಂತಾಗಿದೆ. ಜನರನ್ನು ಸುಂದರವಾಗಿಸುವ ಜತೆಗೆ ವೃತ್ತಿಯವರೂ ಸುಂದರ ಜೀವನ ನಡೆಸುವಂತಿರಬೇಕು ಎಂದರು.
ಬ್ರಹ್ಮಾವರ ವ್ಯ.ಸೇ.ಸ. ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಬಿರ್ತಿ ಸೆಲೂನ್ ಸಾಮಗ್ರಿ ಮಳಿಗೆ ಉದ್ಘಾಟಿಸಿದರು. ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಭಾಸ್ಕರ ಕಾಮತ್ ಭದ್ರತಾ ಕೋಶ ಉದ್ಘಾಟಿಸಿದರು.
ಶಿಕಾರಿಪುರ ಸವಿತಾ ವಿ.ಸ. ಸಂಘದ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಶಿಕಾರಿಪುರ, ದ.ಕ. ಜಿಲ್ಲಾ ಸವಿತಾ ಸ.ಸೌ.ಸ. ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ, ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಶಿವಮೊಗ್ಗ ಶುಭಂ ಸಂಸ್ಥೆ ಅಧ್ಯಕ್ಷ ಶ್ರೀಧರ ಹೆಗ್ಡೆ, ವಾರಂಬಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್. ನಾರಾಯಣ, ತಾಲೂಕು ಸವಿತಾ ಸಮಾಜ ಅಧ್ಯಕ್ಷ ಶಿವರಾಮ ಭಂಡಾರಿ ಹಂದಾಡಿ, ಕಟ್ಟಡ ಮಾಲಕ ಪವನ್ ಡಿ’ಸಿಲ್ವ, ಸಿಇಒ ಮಾಲತಿ ಅಶೋಕ್ ಭಂಡಾರಿ, ವ್ಯವಸ್ಥಾಪಕಿ ಪೃಥ್ವಿ ಜಯ ಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು.
ಸಾಧಕರಾದ ವೆಂಕಟೇಶ್ ಶಿಕಾರಿಪುರ, ಭಾಸ್ಕರ ಸಾಲ್ಯಾನ್ ಬ್ರಹ್ಮಾವರ, ಪವನ್ ಭಂಡಾರಿ ಉಪ್ಪೂರು, ಪಲ್ಲವಿ ಭಂಡಾರಿ ಸಿದ್ದಾಪುರ, ಯಶಸ್ವಿನಿ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ, ರಾಜು ಸಿ. ಭಂಡಾರಿ ಕಿನ್ನಿ ಮೂಲ್ಕಿ ವಂದಿಸಿದರು. ಮಂಜುನಾಥ ಭಂಡಾರಿ ಪಡುಕರೆ ನಿರೂಪಿಸಿದರು.