ಉಡುಪಿ: ಭಾರತದ 5ನೇ ಮತ್ತು ಕರಾವಳಿ ಕರ್ನಾಟಕದ ಪ್ರಥಮ ಹೀರೋ ಶಕ್ತಿ ಮೋಟರ್ ನ ಅಧಿಕೃತ ಶೋರೂಂ ಭಾನುವಾರದಂದು ಕರಾವಳಿ ಜಂಕ್ಷನ್ ಬಳಿಯಿರುವ ಶ್ರೀ ರಾಮದರ್ಶನ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಶಾಸಕ ರಘುಪತಿ ಭಟ್ ಶೋರೂಂ ಅನ್ನು ಉದ್ಘಾಟಿಸಿ ಮಾತನಾಡಿ, ಉಡುಪಿ ಬೆಳೆಯುತ್ತಿರುವ ನಗರ. ಇಂತಹ ಬೆಳೆಯುತ್ತಿರುವ ನಗರದ ಹೃದಯ ಭಾಗದಲ್ಲಿ ಹೀರೋ ಸಂಸ್ಥೆಯವರು ತಮ್ಮ ವಿಶೇಷ ಶೋರೂಂ ಅನ್ನು ಸ್ಥಾಪಿಸಿರುವುದು ನಗರಕ್ಕೆ ಇನ್ನೂ ಹೆಚ್ಚಿನ ಶೋಭೆ ತಂದಿದೆ. ಉಡುಪಿ ಜನತೆಯ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಉತ್ತರೋತ್ತರ ಬೆಳವಣಿಗೆಯನ್ನು ಹೊಂದಲಿ ಎಂದು ಶುಭಹಾರೈಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಟಿ ಕರ್ನೆ ಮಾತನಾಡಿ, ಹೀರೋ ಕಂನಿಯು ತಮ್ಮ ಮೇಲೆ ನಂಬಿಕೆ ಇಟ್ಟು ತಮಗೆ ಇಷ್ಟು ದೊಡ್ಡ ಅವಕಾಶ ಮತ್ತು ಜವಾಬ್ದಾರಿ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಕಂಪನಿಯ ಆಶಯಗಳಿಗೆ ತಕ್ಕಂತೆ ಸಂಸ್ಥೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಬೆಳೆಸುವ ಸದಾಶಯವಿದೆ ಮತ್ತು ಕಂಪನಿ ತಮ್ಮ ಮೇಲೆ ಇಟ್ಟಿರುವ ಭರವಸೆಗೆ ಬದ್ದರಾಗಿ ಕೆಲಸ ಮಾಡುತ್ತೇವೆ. ಡಿಜಿಟಲ್ ಭಾರತದ 2.0 ಶೋರೂಂ ಇದಾಗಿದ್ದು, ಸಂಪೂರ್ಣವಾಗಿ ಡಿಜಿಟಲೀಕೃತವಾಗಿದ್ದು ವಾಹನಗಳ ಭೌತಿಕ ಮತ್ತು ಡಿಜಿಟಲ್ ಪ್ರದರ್ಶನವಿದ್ದು, ಗ್ರಾಹಕರು 3ಡಿ ವೀಕ್ಷಣೆಯಲ್ಲಿ ವಾಹನಗಳ ಮಾದರಿ, ಬಣ್ಣ ಮುಂತಾದವುಗಳನ್ನು ಪರಿಶೀಲಿಸಬಹುದು. ಉಡುಪಿಯ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವುದು ನಮ್ಮ ಬದ್ದತೆಯಾಗಿದ್ದು ಇದರಲ್ಲಿ ಯಶಸ್ವಿಯಾಗುವ ಭರವಸೆ ಇದೆ. ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸಿದ್ದು, ಪ್ರಸಕ್ತ ವರ್ಷದಲ್ಲಿ ಶಕ್ತಿ ಆಟೋ ಮಾರ್ಟ್, ಶಕ್ತಿ ಟೈರ್ಸ್ ಅನ್ನು ಬಿಡುಗಡೆಮಾಡಿದ ಬಳಿಕ ಮೂರನೆಯದಾಗಿ ಉಡುಪಿಯಲ್ಲಿ ಶಕ್ತಿ ಮೋಟರ್ಸ್ ಅನ್ನು ಬಿಡುಗಡೆಗೊಳಿಸಿದ್ದೇವೆ. ಸಂಸ್ಥೆಯ ಶೋರೂಂಗಾಗಿ ಸ್ಥಳಾವಕಾಶ ನೀಡಿದ ಜಾಗದ ಮಾಲಕ ಬನ್ನಂಜೆ ವಿಜಯ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ ಎಂದರು.
ಹೀರೋ ಏರಿಯಾ ಸರ್ವಿಸ್ ಮ್ಯಾನೇಜರ್ ಎನ್.ರಮಣಿ ಮಾತನಾಡಿ, ಹೀರೋ ಕಂಪನಿಯು 45 ಡೀಲರ್ ಶಿಪ್ ಗಳನ್ನು ಹೊಂದಿದ್ದು, ಭಾರತದಲ್ಲೇ ನಂ1 ಡೀಲರ್ ಗಳಾಗಿದ್ದಾರೆ. ಸಂಸ್ಥೆಯಲ್ಲಿ ಕೌಶಲ್ಯಾಧಾರಿತ ಮಾನವ ಸಂಪನ್ಮೂಲ ಮತ್ತು ತಜ್ಞರಿದ್ದು, ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಯನ್ನು ನೀಡಲಾಗುವುದು ಎಂದ ಅವರು ಸಂಸ್ಥೆಯ ಪವನ್ ಮುಂಜಾಲ್ ಅವರು ನೀಡಿದ ಉದ್ಘಾಟನಾ ಫಲಕವನ್ನು ವಿಜಯ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ದ್ವಿಚಕ್ರ ವಾಹನದ ಮೊದಲ ಗ್ರಾಹಕರಿಗೆ ವಾಹನಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ತುಕರಾಮ್ ವೈ ಕರ್ನೆ, ಮಂಜುಳಾ ಟಿ. ಕರ್ನೆ, ಹರ್ಷ ಟಿ ಕರ್ನೆ, ಬಿಸ್ ನೆಸ್ ಡೆವಲಪ್ಮೆಂಟ್ ದೇವೆಂದ್ರ ಸಿಂಗ್, ರಾಜಾ ಸಂಪತ್ ಸ್ಥಳದ ಮಾಲಕ ಬನ್ನಂಜೆ ವಿಜಯ್ ಕುಮಾರ್ ದಕ್ಷಿಣ ವಲಯ ಮುಖ್ಯಸ್ಥ ರಾಮು ರಾವ್, ವಲಯ ಮಾರಾಟ ಮುಖ್ಯಸ್ಥ ಪ್ರದೀಪ್ ನೈರ್, ವಲಯ ಸೇವಾ ಮುಖ್ಯಸ್ಥ ಶಾಜಿ ಟಿ.ಪಿ, ಲೀಡ್ ಚಾನಲ್ ಡೆವೆಲಪ್ಮೆಂಟ್ ಹಿತೇಶ್ ಗೇರಾ, ವಲಯ ಬಿಡಿಭಾಗ ಮುಖ್ಯಸ್ಥ ಸುಧಾಕರ್ ಜಾಧವ್, ಏರಿಯಾ ಮ್ಯಾನೇಜರ್ ಕೆ.ಆರ್ ಸುಬ್ರಮಣ್ಯನ್ ಮತ್ತಿತರರು ಉಪಸ್ಥಿತರಿದ್ದರು.
ಚೇತನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.