ಮಂಗಳೂರು ಕ್ರೆಡಾಯ್ ಮಹಿಳಾ ವಿಭಾಗದ ಉದ್ಘಾಟನೆ: ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಮಹಿಳಾ ಸಬಲೀಕರಣ

ಮಂಗಳೂರು: ಇಲ್ಲಿನ ಓಶಿಯನ್ ಪರ್ಲ್ ನಲ್ಲಿ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ವಿಭಾಗದ ಕ್ರೆಡಾಯ್ ಮಹಿಳಾ ವಿಭಾಗದ
(ಸಿಡಬ್ಲ್ಯೂಡಬ್ಲ್ಯೂ) ಉದ್ಘಾಟನೆಯು ಅದ್ದೂರಿಯಾಗಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಮ್.ಪಿ., ಪ್ರದೀಪ್ ರಾಯ್ಕರ್, ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ ಮತ್ತು ಸಿಡಬ್ಲ್ಯೂಡಬ್ಲ್ಯೂ ರಾಷ್ಟ್ರೀಯ ಕಾರ್ಯದರ್ಶಿ ಸಾರಾ ಜೇಕಬ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು.

ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ ಪ್ರದೀಪ್ ರಾಯ್ಕರ್, ಸಿಡಬ್ಲ್ಯೂಡಬ್ಲ್ಯೂ ಆರಂಭಿಸಿದ ಕಾರ್ಯಗಳು, ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಕ್ರಮಗಳ ಒಳನೋಟಗಳನ್ನು ಹಂಚಿಕೊಂಡರು, ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಕಲ್ಯಾಣಕ್ಕೆ ಕ್ರೆಡಾಯ್ ಬದ್ಧತೆಯನ್ನು ವಿವರಿಸಿದರು.

ಕ್ರೆಡಾಯ್ ಮಂಗಳೂರು ವಿಭಾಗದ ಅಧ್ಯಕ್ಷ ವಿನೋದ್ ಪಿಂಟೊ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು.

ರಜನಿ ಪತ್ರಾವೊ ಸಿಡಬ್ಲ್ಯೂಡಬ್ಲ್ಯೂ ಮಂಗಳೂರು ವಿಭಾಗದ ಕಾರ್ಯದರ್ಶಿ ಹಾಗೂ ಕೃತೀನ್ ಅಮೀನ್ ಸಂಯೋಜಕಿ ಹುದ್ದೆಯನ್ನು ವಹಿಸಿಕೊಂಡು ಮಹಿಳಾ ನಾಯಕತ್ವದ ಬಗ್ಗೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವ ಬಗ್ಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದರು.

ಸಿಡಬ್ಲ್ಯೂಡಬ್ಲ್ಯೂ ರಾಷ್ಟ್ರೀಯ ಕಾರ್ಯದರ್ಶಿಸಾರಾ ಜೇಕಬ್, ಸಿಎಸ್ಆರ್ ಚಟುವಟಿಕೆಗಳು, ಆರ್ಥಿಕತೆ ಸುಸ್ಥಿರತೆಯ ಆನ್‌ಲೈನ್ ತರಗತಿಗಳು ಮತ್ತು ಕಾರ್ಮಿಕ ಅಭಿವೃದ್ಧಿಗೆ ಮಹಿಳೆಯರ ಅಮೂಲ್ಯ ಕೊಡುಗೆ
ಕುರಿತು ಚರ್ಚಿಸಿದರು.

ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸಿ ಎಲ್ಲ ಗಣ್ಯರಿಗೆ ಸ್ಮರಣಿಕೆಗಳನ್ನು ನೀಡಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಖಜಾಂಚಿ ಸುದೀಶ್ ಕರುಣಾಕರನ್ ಅವರು ಸ್ವಾಗತಿಸಿದರು. ಸಿಡಬ್ಲ್ಯೂಡಬ್ಲ್ಯೂ ಕಾರ್ಯದರ್ಶಿ ರಜನಿ ಪತ್ರಾವೊ ವಂದಿಸಿದರು.