ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಉಡುಪಿ: ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು-ಗೆಲುವನ್ನು ಸಮಾನವಾಗಿ ಕಾಣಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ
ವಿದ್ಯಾಕುಮಾರಿ ಹೇಳಿದರು.

ಅವರು ಬುಧವಾರದಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ, ಪೊಲೀಸ್ ಇಲಾಖೆ ಉಡುಪಿ ವತಿಯಿಂದ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಒಂದು ದಿನವನ್ನು ಕ್ರೀಡಾ ಚಟುವಟಿಕೆಗಾಗಿ ಮೀಸಲಿಡುವುದರಿಂದ ಅವರ ಮನೋಲ್ಲಾಸ ಹೆಚ್ಚುವುದರೊಂದಿಗೆ ಮುಕ್ತವಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕೆಲಸದ ಒತ್ತಡವನ್ನು ಮರೆಸುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು, ಸೋಲು-ಗೆಲುವನ್ನು ಲೆಕ್ಕಿಸದೇ ಕ್ರೀಡಾ ಮನೋಭಾವದಿಂದ ಪ್ರತಿಯೊಬ್ಬರೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ
ಹೊಂದಾಣಿಕೆ ಮನೋಭಾವ ಬರುತ್ತದೆ. ಪ್ರಾಣಾಯಾಮವನ್ನು ಕೂಡ ಕ್ರೀಡೆಯಾಗಿ ಪರಿಗಣಿಸಬಹುದಾಗಿದೆ. ಪ್ರತಿನಿತ್ಯ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯನಿರ್ವಹಿಸಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಿವಿಧ ತಂಡಗಳಿಂದ ಪಥ ಸಂಚಲನೆ ನಡೆಯಿತು ಹಾಗೂ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಲಾಯಿತು.

ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಸ್ವಾಗತಿಸಿ, ಯೋಗೇಶ ನಾಯ್ಕ ನಿರೂಪಿಸಿ, ಎಎಸ್‌ಪಿ ಎಸ್.ಟಿ ಸಿದ್ದಲಿಂಗಪ್ಪ
ವಂದಿಸಿದರು.