ಮಣಿಪಾಲದ MSDC ಯಲ್ಲಿ “Center of Excellence in Artificial Intelligence” ಉದ್ಘಾಟನಾ ಸಮಾರಂಭ

ಉಡುಪಿ: ಕೃತಕ ಮತ್ತು ಬುದ್ಧಿಮತ್ತೆ ಇಡೀ ದೇಶದಲ್ಲಿಯೇ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದರ ಅಳವಡಿಕೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದೆ. ಇಂದು ಕೃಷಿ, ಶಿಕ್ಷಣ, ವ್ಯವಹಾರ, ರಕ್ಷಣಾ ಕ್ಷೇತ್ರ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೃತಕ ಬುದ್ಧಿಮತ್ತೆ ಅವಶ್ಯಕವಾಗಿದೆ. ಭವಿಷ್ಯದಲ್ಲಲ್ಲ, ವರ್ತಮಾನದಲ್ಲಿಯೇ ಕೃತಕ ಬುದ್ಧಿಮತ್ತೆ ನಮಗೆ ಅರಿವಾಗದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ಜಾಗ ಪಡೆಯುತ್ತಿದೆ ಎಂದು AICTE ಯ ಅಧ್ಯಕ್ಷರಾದ ಪ್ರೊ.ಡಾ. ಟಿ.ಜಿ.ಸೀತಾರಾಮ್ ಹೇಳಿದ್ದಾರೆ.

ಅವರು ಮಣಿಪಾಲ ಕೌಶಲ್ಯಾಭಿವೃದ್ದಿ ಕೇಂದ್ರ(MSDC)ದಲ್ಲಿ “Center of Excellence in Artificial Intelligence” ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೃತಕಬುದ್ದಿಮತ್ತೆ ಜಗತ್ತನ್ನೇ ಬದಲಾಯಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಸೆಂಟರ್ ನ್ನು MSDC ಉದ್ಘಾಟನೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದವರು ಹೇಳಿದರು.

ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳನ್ನು ಪೇಟೆಯತ್ತ ಸೆಳೆದು ಅವರಿಗೆ ಕೌಶಲ್ಯಗಳನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಾಹೆ ಕಾರ್ಯನಿರ್ವಹಿಸುತ್ತಿದೆ. ಇದೀಗ MSDC Center of Excellence in Artificial Intelligence ಶುರುಮಾಡುವ ಮೂಲಕ ಯುವಸಮೂಹನ್ನು ಇನ್ನಷ್ಟು ತಂತ್ರಜ್ಞಾನದತ್ತ ತರುವ ಪ್ರಯತ್ನ ಮಾಡಿದೆ. ಬದಲಾವಣೆ ಎನ್ನುವುದು ಒಂದು ಸಹಜ ಪ್ರಕ್ರಿಯೆ. ತಂತ್ರಜ್ಞಾನದಲ್ಲೂ ಬದಲಾವಣೆಗಳಾಗುತ್ತಿದೆ, ಅದಕ್ಕೆ ತಕ್ಕಂತೆ ಹಜ್ಜೆ ಇಡುವುದು ಅನಿವಾರ್ಯ ಎಂದು ಹೇಳಿದರು.

ಡಾ.ಟಿ.ಎಂ.ಪೈ.ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ, ತೋನ್ಸೆ ಸಚಿನ್ ಪೈ ಅವರು ಮಾತನಾಡಿ, ಯುವ ಜನತೆಯನ್ನೇ ಕೃತಕಬುದ್ಧಿಮತ್ತೆಯತ್ತ ಕರೆತರಬೇಕಾಗಿದೆ. ಇಂದು ಚಾಟ್ ಜಿಪಿಟಿಯಂತಹ ತಂತ್ರಜ್ಞಾನ ಕೆಲವೇಸೆಕೆಂಡುಗಳಲ್ಲಿ ನಮ್ಮ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ. ಹಾಗಾಗಿ ತಂತ್ರಜ್ಞಾನದ ಜೊತೆ ವೇಗ ಕೂಡ ಮುಖ್ಯವಾಗಿದೆ. MSDC ಈ ತಂತ್ರಜ್ಞಾನದ ವೇಗದ ಕೌಶಲ್ಯವನ್ನು ನಿಮಗೆ ನೀಡುವಲ್ಲಿ ಉತ್ಸುಕವಾಗಿದೆ ತಂತ್ರಜ್ಞಾನದ ಜೊತೆಗೆ ಪೂರಕವಾಗಿ ಬದುಕುವುದು ಇಂದು ಬಹಳ ಮುಖ್ಯ ಎಂದರು.

ವಿಷನ್ ಡಿಜಿಟೆಲ್ ಮೀಡಿಯಾದ ಸ್ಥಾಪಕರಾದ ಡಾ. ಹರಿಕೃಷ್ಣ ಮಾರನ್ ಅವರು ದೇಶ-ವಿದೇಶದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್’ನ ಕಾರ್ಯವೈಖರಿ, ಪ್ರಾಮುಖ್ಯತೆ ಹಾಗೂ ಇದನ್ನು ಯಾವ ರೀತಿ ಉಪಯೋಗಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು.

ಮಣಿಪಾಲ MSDC ಚೇರ್ಮನ್ ಬ್ರೀ.ಡಾ. ಸುರ್ಜೀತ್ ಸಿಂಗ್ ಪಬ್ಲ ಸ್ವಾಗತಿಸಿದರು. MSDC ಸ್ಕೂಲ್ ಆಫ್ ಐಟಿ ಸೆಂಟರ್ ಹೆಡ್ ರಾಜಲಕ್ಷ್ಮೀ ಆನಂದನ್ ಉಪಸ್ಥಿತರಿದ್ದು, ಶುಭ ಹಾರೈಸಿದರು. MSDC ರಿಜಿಸ್ಟ್ರಾರ್ ಡಾ. ಆಂಜಯ್ಯ ದೇವಿನೆನಿ ವಂದಿಸಿದರು.

ಶ್ರುತಿ ಹಾಗೂ ಅನುಷ ಕಾರ್ಯಕ್ರಮ ನಿರೂಪಿಸಿದರು. ನೀತಾ ಶೆಟ್ಟಿ ಅವರು ಆನ್‌ಲೈನ್ ಮೂಲಕ ಸೇರ್ಪಡೆಗೊಂಡ ಅತಿಥಿಗಳನ್ನು ಪರಿಚಯಿಸಿದರು.