ಹೆಬ್ರಿ: ನನಗೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಬದುಕಿದ ನಾಡಿನ ಶ್ರೇಷ್ಠ ಸಾಹಿತಿ ಕೀರ್ತಿಶೇಷ ಅಂಬಾತನಯರು ಎಂದೂ ಪ್ರಶಸ್ತಿಗೆ ಅರ್ಜಿ ಹಾಕಿದವರಲ್ಲ. ಅವರ ಸ್ಮರಣಾರ್ಥಕಳೆದ ಹಲವಾರು ವರ್ಷಗಳಿಂದ ಯಾವುದೇ ಅರ್ಜಿ ಸಲ್ಲಿಸದೆ ತನ್ನಷ್ಟಕ್ಕೆ ಶಿಕ್ಷಣ ಜೊತೆ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಗುರುತಿಸಿಕೊಂಡ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಚಾಣಕ್ಯ ಸಂಸ್ಥೆಯ ಸಮಾಜಮುಖಿ ಚಿಂತನೆ ಶ್ಲಾಘನೀಯಎಂದು ನಿಟ್ಟೆ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀ ಮುದ್ರಾಡಿ ಹೇಳಿದರು.
ಅವರು ಹೆಬ್ರಿ ಎಸ್. ಆರ್. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಾಡಿನ ಹಿರಿಯ ಸಾಹಿತಿ ಕೀರ್ತಿ ಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಹೆಬ್ರಿ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಹೆಬ್ರಿ ಎಸ್. ಆರ್. ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಹೇಮಾ ಪಿ.ಶೆಟ್ಟಿ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಆರ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಮಾತನಾಡಿ ಪತ್ರಕರ್ತರಾದ ಉದಯ್ ಕುಮಾರ್ ಶೆಟ್ಟಿ ಅವರ ಸಮಾಜಮುಖಿ ಚಿಂತನೆ ಇತರರಿಗೆ ಮಾದರಿ.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವಕಾಶ ಕಲ್ಪಿಸಿದರ ಜೊತೆಗೆ ಯಾವುದೇ ಲಾಭಾಂಶವನ್ನು ಯೋಚಿಸಿದೆ ಅವರು ಮಾಡುವ ಸಮಾಜಮುಖಿ ಕೆಲಸಕ್ಕೆ ಸರ್ವರ ಸಹಕಾರ ಅಗತ್ಯವಿದೆ ಎಂದರು.
ಅತಿ ಕಡಿಮೆ ಶುಲ್ಕದಲ್ಲಿ ಹೆಸರಾಂತ ತರಬೇತಿದಾರರನ್ನು ಒಂದೆಡೆ ಸೇರಿಸಿ ಎಲ್ಲಾ ಕಲಾಪ್ರಕಾರಗಳನ್ನು ತರಬೇತಿ ನೀಡುತ್ತಿರುವ ಚಾಣಕ್ಯ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸಿದಾಗ ಅವರ ಭವಿಷ್ಯ ಉಜ್ಜಲವಾಗಲು ಸಾಧ್ಯ ಎಂದು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಶಾಲೆಗೆ ಸಂದ ಗೌರವ:
ಪ್ರಶಸ್ತಿ ಸ್ವೀಕರಿಸಿದ ಹೆಬ್ರಿ ಎಸ್. ಆರ್. ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಹೇಮಾ ಪಿ.ಶೆಟ್ಟಿ ಮಾತನಾಡಿ ಈ ಪ್ರಶಸ್ತಿಯು ನನ್ನ ಶಾಲೆಗೆ ಸಂದ ಗೌರವವಾಗಿದೆ.
ಕಳೆದ 17 ವರ್ಷಗಳಿಂದ ಮಕ್ಕಳಿಗೆ ಪಾಠ ಹೇಳಿ ಕೊಡುವುದರ ಜೊತೆಗೆ ಸಾಂಸ್ಕೃತಿಕವಾಗಿ ಗುರುತಿಸುವಂತೆ ಮಾಡಿದ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಹಾಗೂ ಸಪ್ನಾ ಮೇಡಂ ಅವರಿಗೆ ಹಾಗೂ ಗುರುತಿಸಿದ ಚಾಣಕ್ಯ ಸಂಸ್ಥೆಗೆ ಆಭಾರಿಯಾಗಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹೆಬ್ರಿ ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರದ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಹೆಬ್ರಿ,ನೇತಾಜಿ ಫ್ರೆಂಡ್ಸ್ ಮುದ್ರಾಡಿ ಇವರ ಸಹಯೋಗದೊಂದಿಗೆ ನಡೆದ ಹೆಬ್ರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಮುದ್ರಾಡಿ ಗ್ರಾ.ಪಂ.ಮಾಜಿ ಸದಸ್ಯ ಸನತ್ ಕುಮಾರ್, ಮುದ್ರಾಡಿ ನೇತಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸಂತೋಷ ಪೂಜಾರಿ ಬಲ್ಲಾಡಿ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಅಧ್ಯಕ್ಷ ಹರೀಶ್ ಶೆಟ್ಟಿ ನಾಡ್ಪಾಲ್, ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಾಣಕ್ಯ ಮೆಲೋಡಿಸ್ ತಂಡದಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.
ದೀಪಿಕಾ ಶೆಟ್ಟಿ ಪ್ರಶಸ್ತಿ ಪುರಸ್ಕತರ ಪತ್ರ ವಾಚಿಸಿದರು. ಪವಿತ್ರ ಪ್ರಾರ್ಥಿಸಿದರು.
ಹೆಬ್ರಿ ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತಾನಾಡಿದರು. ಮುದ್ರಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿ, ವಂದಿಸಿದರು.















