ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಧರ್ಮ ಧರ್ಮದ ನಡುವೆ ಸಂಘರ್ಷ ಬೇಡ; ಪ್ರಣವಾನಂದ ಸ್ವಾಮೀಜಿ ಕರೆ

ಉಡುಪಿ: ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು. ಧರ್ಮ ಧರ್ಮದ ನಡುವೆ ಘರ್ಷಣೆಗೆ ಅವಕಾಶ ಮಾಡಿಕೊಡಬಾರದು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶರಣಬಸವೇಶ್ವರ ಮಠಾಧಿಪತಿ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸಂವಿಧಾನವೇ ನಮ್ಮ ದೇವರು. ನಮ್ಮ ಆಚಾರ ವಿಚಾರ ಅದಕ್ಕೆ ಧಕ್ಕೆಯಾಗಬಾರದು. ಅವರವರ ಧರ್ಮದ ಆಚಾರ ವಿಚಾರಗಳನ್ನು‌ ಅವರು ಆಚರಣೆ ಮಾಡಿಕೊಂಡು ಹೋಗಲಿ.‌ ಅದು ಬಿಟ್ಟು ಒಂದು ಧರ್ಮದ ಸಂಪ್ರದಾಯ, ಆಚಾರ-ವಿಚಾರಗಳನ್ನು ಇನ್ನೊಂದು ಧರ್ಮದ ಮೇಲೆ ಹೇರುವುದು ಸರಿಯಲ್ಲ ಎಂದರು.

ನಾವೆಲ್ಲರೂ ಸಂವಿಧಾನಾತ್ಮಕ ದೇಶದಲ್ಲಿ ಬದುಕುತ್ತಿರುವವರು. ಹಾಗಾಗಿ ಯಾವುದೇ ಘರ್ಷಣೆ, ಸಂಘರ್ಷಕ್ಕೆ ಯಾರು ಅವಕಾಶ ಮಾಡಿಕೊಡಬಾರದು. ಎಲ್ಲರನ್ನೂ ಒಪ್ಪಿ ಅಪ್ಪಿಕೊಂಡು ಮುನ್ನಡೆಯುವ ವಾತಾವರಣ ನಿರ್ಮಾಣ ಆಗಬೇಕು ಎಂದು ಹೇಳಿದರು.

ಭಾರತ ಸಾವಿರಾರು  ವರ್ಷಗಳ ಇತಿಹಾಸ ಹೊಂದಿರುವ‌ ದೇಶ. ಹೊರಗಿನಿಂದ ಬಂದವರನ್ನು ಎರಡು ಕೈಗಳಿಂದ ತಬ್ಬಿಕೊಂಡು ಬರಮಾಡಿಕೊಂಡಿದೆ. ಹೀಗಾಗಿ ಧರ್ಮ ಧರ್ಮದ ನಡುವೆ ಯಾವುದೇ ಘರ್ಷಣೆ ಇಲ್ಲದೆ, ಎಲ್ಲರೂ ಹೊಂದಾಣಿಕೆಯಿಂದ ಮುನ್ನಡೆಯಬೇಕು. ಸಂವಿಧಾನದಲ್ಲಿ ಹೇಳಿರುವ ಆಶಯಗಳನ್ನು ಎಲ್ಲರೂ ಪಾಲಿಸಿಕೊಂಡು ಹೋಗಬೇಕು ಎಂದರು.