ಕುಂದಾಪುರ: ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಶಾ ಎಸ್ (52) ಬುಧವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿಯಾಗಿದ್ದ ಆಶಾ ಅವರು ಬುಧವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು ಬಳಿಕ ಅಪರಾಹ್ನ ಕಚೇರಿಯಿಂದ ಯಾರಿಗೂ ತಿಳಿಸದೆ ನೇರವಾಗಿ ಮನೆಗೆ ಹೋಗಿ, ಮಹಡಿಯ ಕೋಣೆಯಲ್ಲಿ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ಯಾಂಕ್ ಮೂಲಗಳ ಪ್ರಕಾರ ಲಾಕರ್ ನಲ್ಲಿಟ್ಟಿದ್ದ ಚಿನ್ನ ಕಂಡುಬರದ ಹಿನ್ನೆಲೆ ಲಾಕರ್ ನಿಭಾಯಿಸುತ್ತಿದ್ದ ಆಶಾ ಅವರನ್ನು ಪ್ರಶ್ನಿಸಲಾಗಿ, ಇದರಿಂದ ಅವಮಾನಗೊಳ್ಳುವ ಭೀತಿಯಿಂದ ಆತ್ಯಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.
ವರದಿಗಳ ಪ್ರಕಾರ, ಆಶಾ ಅವರು ಕಚೇರಿಯಲ್ಲಿ ಇಲ್ಲದಿರುವುದು ಗೊತ್ತಾದ ಬಳಿಕ ಹುಡುಕಾಟ ನಡೆಸಲಾಗಿತ್ತು. ಕೊನೆಯಲ್ಲಿ ಸಿಸಿ ಟಿವಿ ಪರಿಶೀಲಿಸಿದಾಗ ಮನೆಯ ಕಡೆಗೆ ಸ್ಕೂಟಿ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ. ಕೂಡಲೇ ಮಹೇಶ್ ಹಾಗೂ ಸಿಬ್ಬಂದಿ ಮಂಜುನಾಥ, ಆಶಾ ಅವರ ಮನೆಗೆ ಬಂದು ನೋಡಿದಾಗ ಅವರು ನೇಣುಬಿಗಿದುಕೊಂಡಿದ್ದಾರೆ. ಆಶಾ ಅವರ ತಾಯಿ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದು ಬಾಗಿಲು ಒಡೆದು ನೇಣಿನಿಂದ ಆಶಾ ಅವರನ್ನು ಕೆಳಗಿಳಿಸಿ, ಕೂಡಲೇ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಬಳಿಕ ಅಲ್ಲಿಂದ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಆಶಾ ಅವರಿಗೆ ಇಬ್ಬರು ಮಕ್ಕಳಿದ್ದು ಪುತ್ರ ಮದುವೆಯಾಗಿ ಯುಎಸ್ಎಯಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಆತ್ಮಹತ್ಯೆಯ ಕೆಲವು ಕ್ಷಣಗಳ ಮೊದಲು ಮಗಳಿಗೆ ಸಾರೀ ಮಗಳೆ ಎಂದು ಮೆಸೇಜ್ ಮಾಡಿದ್ದರು ಎಂದು ತಿಳಿದುಬಂದಿದೆ. ಮನೆಗೆ ಬಂದಿದ್ದ ಆಶಾ ಮೊದಲು ತಾಯಿಯ ಹತ್ತಿರ ನೀನು ಊಟ ಮಾಡು. ನನಗೆ ಸೊಸೈಟಿಯ ಕೆಲಸ ಇದೆ. ನಾನು ಮಹಡಿಯ ಮೇಲಿನ ರೂಂನಲ್ಲಿ ಇರುತ್ತೇನೆ. ನನ್ನನ್ನು ಕರೆಯಬೇಡ ಎಂದು ಹೇಳಿದ್ದರು ಎಂದು ತಾಯಿ ಹೇಳಿಕೆ ನೀಡಿದ್ದಾರೆ.