ಶಬರಿಮಲೆ ಭಕ್ತರಿಗೆ ಜಿಲ್ಲಾಡಳಿತದ ಮಹತ್ವದ ಸೂಚನೆ, ಪಂಪಾ ನದಿಗೆ ಬಟ್ಟೆ ಎಸೆದರೆ ರೂ.5,000 ದಂಡ!

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಜಿಲ್ಲಾಡಳಿತ ಮಹತ್ವದ ಎಚ್ಚರಿಕೆ ನೀಡಿದೆ. ಪವಿತ್ರ ಪಂಪಾ ನದಿಗೆ ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯ ಎಸೆಯುವುದು ಅಥವಾ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದರೆ ಗರಿಷ್ಠ ₹5,000 ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಪಂಪಾ ನದಿಯ ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನದಿಯ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ. ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೂಡ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಶಬರಿಮಲೆ ಹಾಗೂ ಪಂಪಾ ನದಿಯ ಸ್ವಚ್ಛತೆ ಕಾಪಾಡುವಂತೆ ಭಕ್ತರಿಗೆ ಕರೆ ನೀಡಿದ್ದಾರೆ.

ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆಯುವ ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ. ಯಾತ್ರೆಯ ಭಾಗವಾಗಿ ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಸಂಪ್ರದಾಯವಾಗಿದೆ. ಆದರೆ, ಸ್ನಾನದ ಬಳಿಕ ಭಕ್ತರು ಒದ್ದೆ ಬಟ್ಟೆಗಳನ್ನು ನದಿಯಲ್ಲೇ ಬಿಟ್ಟು ಹೋಗುತ್ತಿರುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ.

ಪ್ರತಿದಿನ ಹಲವು ಟನ್ ಬಟ್ಟೆ ನದಿಗೆ

ಉತ್ಸವದ ಅವಧಿಯಲ್ಲಿ ಪ್ರತಿದಿನ ಹಲವು ಟನ್‌ಗಳಷ್ಟು ಬಟ್ಟೆಗಳನ್ನು ಪಂಪಾ ನದಿಗೆ ಎಸೆಯಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಅಭ್ಯಾಸಕ್ಕೆ ಕಡಿವಾಣ ಹಾಕಲು ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ನದಿಗೆ ಬಟ್ಟೆ ಅಥವಾ ಇತರ ತ್ಯಾಜ್ಯಗಳನ್ನು ಎಸೆಯುವುದು ಕಂಡುಬಂದರೆ ಸ್ಥಳದಲ್ಲೇ ಗರಿಷ್ಠ ₹5,000 ದಂಡ ವಿಧಿಸಲಾಗುತ್ತದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 163 ಹಾಗೂ ಕೇರಳ ಪಂಚಾಯತ್ ರಾಜ್ ಕಾಯ್ದೆ, 1994ರ ಸೆಕ್ಷನ್ 219N(1) ಮತ್ತು (3)ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ದಂಡದ ಮೊತ್ತವನ್ನು 15 ದಿನಗಳೊಳಗೆ ಪಾವತಿಸದಿದ್ದರೆ ಹೆಚ್ಚುವರಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.