ಕಾರ್ಕಳ: ಸ್ವರ್ಣ ಕಾರ್ಕಳ ಕಟ್ಟಲು ಇನ್ನಷ್ಟು ಬದ್ಧ ಮತ್ತು ಕಾರ್ಕಳ ಕ್ಷೇತ್ರವನ್ನು ಇನ್ನಷ್ಟು ಸಮೃದ್ಧ ಮಾಡುವಲ್ಲಿ ಶ್ರಮಿಸುತ್ತೇನೆ ಎಂದು ಕಾರ್ಕಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಮೂರು ಸಾವಿರ ಕೋಟಿಯಷ್ಟು ಅಭಿವೃದ್ಧಿ:
ಕಾರ್ಕಳ ಕ್ಷೇತ್ರದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕೋಟಿ ರೂ. ಅನುದಾನ ಬಳಕೆ ಮಾಡಲಾಗಿದೆ. ದಾಖಲೆಯ 236 ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಾಣ ಮೂಲಕ ಕೃಷಿ, ಅಂತರ್ಜಲ ಬಲ ವರ್ಧನೆಗೆ ಒತ್ತು ನೀಡಲಾಗಿದೆ ಎಂದವರು ಹೇಳಿದ್ದಾರೆ.
ರೈತರಿಗೆ ಕೃಷಿ ಚಟುವಟಿಕೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವುದು, 108 ಕೋಟಿ ರೂ. ವೆಚ್ಚದಲ್ಲಿ ಎಣ್ಣೆಹೊಳೆ ಏತ ನೀರಾವರಿ ಯೋಜನೆ, ಕ್ಷೇತ್ರದಾದ್ಯಂತ ಮುಖ್ಯ ರಸ್ತೆಗಳ ಜತೆಗೆ ಗ್ರಾಮೀಣ ಭಾಗದಲ್ಲಿ ಸರ್ವಋತು ರಸ್ತೆ, ಹೆಬ್ರಿ ನೂತನ ತಾಲೂಕಿಗೆ ಆಡಳಿತ ಸೌಧ, ಪ್ರವಾಸಿ ಮಂದಿರ, ಪೋಲಿಸ್ ಠಾಣೆ ನಿರ್ಮಾಣ, ಹೆಬ್ರಿ ತಾಪಂ ಕಚೇರಿ ಹಾಗೂ ನೂತನ ಬಸ್ ನಿಲ್ದಾಣ ನಿರ್ಮಾಣ, ಸುಸಜ್ಜಿತ ತಾಲೂಕು ಆಸ್ಪತ್ರೆ ನಿರ್ಮಾಣದ ಜತೆಗೆ ಡಯಾಲಿಸಿಸ್ ಕೇಂದ್ರ, ಆಮ್ಲಜನಕ ಉದ್ಘಾಟನಾ ಘಟಕ, ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆ, 25 ವರ್ಷಗಳಷ್ಟು ಹಳೆಯದಾದ ಒಳಚರಂಡಿ ವ್ಯವಸ್ಥೆ ಮರು ನಿರ್ಮಾಣ, ಸುವ್ಯವಸ್ಥಿತ, ವೈಜ್ಞಾನಿಕ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆ, ನಿಟ್ಟೆ ಎಂಆರ್ ಎಫ್ ಘಟಕ ಹಾಗೂ ಹೆಬ್ರಿಯಲ್ಲಿ ಮಿನಿ ಎಂಆರ್ ಎಫ್ ಘಟಕದ ಸ್ಥಾಪನೆ ಮೂಲಕ ತ್ಯಾಜ್ಯಗಳಿಗೆ ಮುಕ್ತಿ ಹಾಗೂ ಉದ್ಯೋಗ ಅವಕಾಶ, ಪೇಟೆಗಳ ಸಮಗ್ರ ಅಭಿವೃದ್ಧಿಗೆ ಜೋಡುರಸ್ತೆ, ಬಜಗೋಳಿ, ಮುನಿಯಾಲು, ಬೈಲೂರು ಚತುಷ್ಪಥ ರಸ್ತೆಗಳಾಗಿ ಪರಿವರ್ತನೆ ಮಾಡಲಾಗಿದೆ ಎಂದಿದ್ದಾರೆ.
ಹಕ್ಕುಪತ್ರದ ಹಕ್ಕು:
ಕಾರ್ಕಳ ತಾಲೂಕಿನ ಪಳ್ಳಿ ಖೈರು ಕೆರೆ- ಮುದ್ರಾಡಿ ಮದಗ ಕೆರೆ- ಹಿರ್ಗಾನ ಹರಿಯಪ್ಪನ ಕೆರೆ- ಎಳ್ಳಾರೆ, ಹೊನ್ನೆಜೆಡ್ಡು ಕೆರೆ- ಬೇಳಂಜೆ ಮಲ್ಲಿಕಾರ್ಜುನ ದೇವಸ್ಥಾನ ಕೆರೆ ನಿರ್ಮಿಸಲಾಗಿದೆ, ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸವಾಗಿದ್ದ ಬಡ ಕುಟುಂಬಗಳಿಗೆ ಡೀಮ್ಡ್ ಫಾರೆಸ್ಟ್ ಕಾರಣದಿಂದಾಗಿ ನನೆಗುದಿಗೆ ಬಿದ್ದಿದ್ದ 2600 ಕ್ಕೂ ಹೆಚ್ಚು ಹಕ್ಕು ಪತ್ರ ವಿತರಣೆ, 6 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನ, ಮಾಳ ಗ್ರಾಮದಲ್ಲಿ ಮಲೆಕುಡಿಯ ಸಮುದಾಯ ಭವನ ನಿರ್ಮಾಣ, ನಾನಾ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಮೆಸ್ಕಾಂ ವಿಭಾಗೀಯ ಕಚೇರಿ, ನಿಟ್ಟೆ ಉಪವಿಭಾಗ ಕಚೇರಿ ಹಾಗೂ ಶಾಖಾ ಕಚೇರಿಗಳ ಸ್ಥಾಪನೆ, ಜತೆಗೆ ಬೆಳ್ಮಣ್, ಅಜೆಕಾರು, ಬಜಗೋಳಿ ಹಾಗೂ ಬೈಲೂರಿನ ವಿದ್ಯುತ್ ಉಪ ಕೇಂದ್ರಗಳ ನಿರ್ಮಾಣ, ಹೆಚ್ಚುವರಿ ಟಿಸಿ ಅಳವಡಿಕೆ, ಬಡ ಜನರಿಗೆ ಬೆಳಕು ಯೋಜನೆಯಡಿ ಉಚಿತ ವಿದ್ಯುತ್ ಕಲ್ಪಿಸಲಾಗಿದೆ ಇವೆಲ್ಲಾ ಕಾರ್ಕಳದ ಜನತೆಗೆ ಇವೆಲ್ಲಾ ಉಪಯೋಗವಾಗಿದೆ ಎಂದವರು ತಿಳಿಸಿದ್ದಾರೆ.
ಕಾರ್ಕಳ ಕ್ಷೇತ್ರದಲ್ಲಿ ಇನ್ನೂ ಏನೇನಾಗಿದೆ?
ಕಾರ್ಕಳದ ಸರಕಾರಿ ಕಟ್ಟಡಗಳ ನವೀಕರಣ, ಕೋರ್ಟ್ ಕಟ್ಟಡ, ತಾಪಂ ಕಟ್ಟಡ, ಪೊಲೀಸ್ ವಸತಿಗೃಹ, ದೇವರಾಜ ಅರಸು ಭವನ, ಅಕ್ಷರ ಭವನ ನಿರ್ಮಿಸಲಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಮಾದರಿ ಕಾರ್ಯ
ಕೋವಿಡ್ ಸಂದರ್ಭ ಮುಂಬಯಿ, ಪುಣೆ ಹಾಗೂ ಬೆಂಗಳೂರಿನ ಬಂಧುಗಳಿಗೆ ಕ್ವಾರಂಟೈನ್ ಕೇಂದ್ರ ಜತೆಗೆ ಕ್ಷೇತ್ರದ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಮಾದರಿ ಕಾರ್ಯ ಮಾಡಲಾಗಿದೆ. ವಾತ್ಸಲ್ಯ ಆರೋಗ್ಯ ತಪಾಸಣಾ ಶಿಬಿರದ ಮೂಲಕ 40 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಬಿಎಸ್ಸಿ ನರ್ಸಿಂಗ್ ಕಾಲೇಜು, ಜರ್ಮನ್ ತಂತ್ರಜ್ಞಾನದೊಂದಿಗೆ ಯುವಕರಿಗೆ ಉದ್ಯೋಗ ಭದ್ರತೆ ನೀಡುವ ಕೆಜಿಟಿಟಿಐ, ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದ ಐಟಿಐ ಕಾಲೇಜು, ಕರ್ನಾಟಕ ಪಬ್ಲಿಕ್ ಸ್ಕೂಲ್, ಹಾಸ್ಟೆಲ್ ಹಾಗೂ ಶಾಲಾ- ಕಾಲೇಜು ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.
ಕಾರ್ಲಕಜೆ- ಬಿಳಿ ಬೆಂಡೆ ಫೇಮಸ್ಸು:
ನಮ್ಮ ಬ್ರ್ಯಾಂಡ್ – ನಮ್ಮ ಹೆಮ್ಮೆ ಕಲ್ಪನೆಯಡಿ ಕಾರ್ಲ ಕಜೆ ಹಾಗೂ ಬಿಳಿ ಬೆಂಡೆ ಕಾರ್ಯಕ್ರಮಗಳ ಆಯೋಜನೆ ಮೂಲಕ ಸ್ಥಳೀಯ ಉತ್ಪನ್ನಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈ ಯೋಜನೆ ಕರಾವಳಿ ಮಾತ್ರವಲ್ಲದೆ ನಾಡಿನಾದ್ಯಂತ ಮನೆಮಾತಾಗಿದೆ.
ಸಾಂಸ್ಕೃತಿಕ, ಪಾರಂಪರಿಕತೆಯೊಂದಿಗೆ ವೈಶಿಷ್ಟ್ಯತೆ ಹೊಂದಿರುವ ಕಾರ್ಕಳವನ್ನು ಪ್ರವಾಸಿ ನಗರವನ್ನಾಗಿ ರೂಪಿಸುವ ದೃಷ್ಟಿಯಿಂದ ಹತ್ತು ಹಲವು ಯೋಜನೆ ರೂಪಿಸಲಾಗಿದೆ. ಹೆಬ್ರಿ ಮತ್ತು ನಲ್ಲೂರು ಹರಿಯಪ್ಪನ ಕೆರೆ ಬಳಿ ಆಕರ್ಷಕ ಸಾಲು ಮರದ ತಿಮ್ಮಕ್ಕ ಟ್ರೀಪಾರ್ಕ್ ನಿರ್ಮಾಣ, ಕಾರ್ಕಳ ತಾಲೂಕು ಕಚೇರಿ ಬಳಿ ಅತ್ಯಾಕರ್ಷಕ ವಾಜಪೇಯಿ ಉದ್ಯಾನವನ ನಿರ್ಮಿಸಲಾಗಿದೆ. ಪ್ರವಾಸಿ ಆಕರ್ಷಣಾ ಕೇಂದ್ರವಾಗಿ ಹಂತ ಹಂತವಾಗಿ ನವರೂಪ ಪಡೆಯುತ್ತಿರುವ ಕೋಟಿ ಚೆನ್ನಯ್ಯ ಥೀಂ ಪಾರ್ಕ್, ರಾಜ್ಯದ ಆರನೇ ರಂಗಾಯಣವಾಗಿ ‘ಯಕ್ಷ ರಂಗಾಯಣ’ದ ಸ್ಥಾಪನೆ.ಹೀಗೆ ಕಾರ್ಕಳ ಕ್ಷೇತ್ರಕ್ಕೆ ಪೂರಕವಾದ ನೂರಾರು ಯೋಜನೆಗಳನ್ನು ಗುರುತಿಸಿ ಕಾರ್ಕಳ ಮತದಾರರು ತಮ್ಮ ಕೈಹಿಡಿಯಲಿದ್ದಾರೆ ಎನ್ನುವ ಭರವಸೆ ವಿ ಸುನೀಲ್ ಕುಮಾರ್ ಅವರದ್ದು.