ಉಡುಪಿ: ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಕ್ಷಣ ಜಾರಿಗೊಳಿಸಬೇಕು ಹಾಗೂ ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದ ಪಿಎಲ್‌ಐ (ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ) ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಯುಎಫ್‌ಬಿಯು (UFBU) ಕರೆ ನೀಡಿದ್ದ ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಶುಕ್ರವಾರ ಬ್ಯಾಂಕ್ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಕೋರ್ಟ್ ರೋಡ್‌ನ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಭಾಗವಹಿಸಿ, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು ಮತ್ತು ತಾರತಮ್ಯದಿಂದ ಕೂಡಿದ ಪಿಎಲ್‌ಐ ವ್ಯವಸ್ಥೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟದ ಉಡುಪಿ ಜಿಲ್ಲಾ ಸಂಚಾಲಕ ನಾಗೇಶ್ ನಾಯಕ್ ಮಾತನಾಡಿ, ಕೆಲಸದ ಒತ್ತಡ ತಾಳಲಾರದೆ ನೌಕರರು ಆತ್ಮಹತ್ಯೆಯಂತಹ ಕಠಿಣ ಹಾದಿ ಹಿಡಿಯುತ್ತಿರುವುದು ಅತ್ಯಂತ ಬೇಸರದ ಸಂಗತಿ. ಬ್ಯಾಂಕ್ ನೌಕರರ ಸಂಕಷ್ಟವನ್ನು ಅರ್ಥಮಾಡಿಕೊಳ್ಳುವವರು ಇಲ್ಲದಂತಾಗಿದೆ. ತೀವ್ರ ಒತ್ತಡದ ನಡುವೆಯೇ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್‌ನ ಮೊದಲ ಸಾಲಿನಲ್ಲಿರುವ ನೌಕರರು ಮತ್ತು ಅಧಿಕಾರಿಗಳು ನಿತ್ಯ ಗ್ರಾಹಕರಿಗೆ ಸೇವೆ ನೀಡುತ್ತಾರೆ. ಆದರೆ ಮೇಲಾಧಿಕಾರಿಗಳು ಎಸಿ ಕೊಠಡಿಗಳಲ್ಲಿ ಕುಳಿತುಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ. ಯಾವುದೇ ಕೆಲಸ ಮಾಡದವರಿಗೆ ಪಿಎಲ್‌ಐ ಹೆಸರಿನಲ್ಲಿ ದೊಡ್ಡ ಮೊತ್ತದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ ನಿತ್ಯ ಗ್ರಾಹಕರ ಸೇವೆಯಲ್ಲಿ ತೊಡಗಿರುವ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾರ ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಈ ತಾರತಮ್ಯದ ನೀತಿಯ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ನೌಕರರು ನಿರಂತರ ಒತ್ತಡದ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾರದಲ್ಲಿ ಎರಡು ದಿನಗಳ ವಿಶ್ರಾಂತಿ ಅತ್ಯಗತ್ಯವಾಗಿದೆ. ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವುದು ನೌಕರರ ಬಹುದಿನಗಳ ಬೇಡಿಕೆಯಾಗಿದೆ.
ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ನಾಗೇಶ್ ನಾಯಕ್ ಎಚ್ಚರಿಸಿದರು.















