ಉಡುಪಿ: ಆರ್‌ಟಿಐ ಕಾರ್ಯಕರ್ತ ಶಂಕರ ಶಾಂತಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ, ಮಾ.15ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಾನು ಹಾಗೂ ನನ್ನ ಮಕ್ಕಳು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಶಂಕರ ಶಾಂತಿ ಅವರ ಪತ್ನಿ ಪೂರ್ಣಿಮ ಶಂಕರ ಶಾಂತಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಡನನ್ನು ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಈಗಾಗಲೇ ಮೂರು ವಾರ ಕಳೆದಿದೆ. ಆದರೂ ಪ್ರಮುಖ ಆರೋಪಿಗಳ ಬಂಧನವಾಗದಿರುವುದು ವಿಷಾದನೀಯ ಎಂದರು.
ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಪ್ರಕರಣದ ತನಿಖೆ ವಿಳಂಬ ಆಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹಾಗಾಗಿ ನನ್ನ ಗಂಡನಿಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಹಾಗೂ ಕೂಡಲೇ ಪ್ರಮುಖ ಆರೋಪಿಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.