ಚಿತ್ರ ಬಿಡುಗಡೆ : ಪೂಂಛ್ ದಾಳಿಯಲ್ಲಿ ಅಮೆರಿಕಾ ನಿರ್ಮಿತ M4 ಬಂದೂಕು ಬಳಕೆ

ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಯ ಸಹವರ್ತಿ ಸಂಘಟನೆಯಾದ ಪೀಪಲ್ಸ್ ಆಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಪೂಂಛ್ ನ ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.ಜಮ್ಮು ಮತ್ತು ಕಾಶ್ಮೀರ ಪೂಂಛ್ ನಲ್ಲಿ ನಡೆದ ದಾಳಿಯಲ್ಲಿ ಉಗ್ರರು ಅಮೆರಿಕ ನಿರ್ಮಿತ ಎಂ4 ಬಂದೂಕು ಬಳಸಿರುವುದಾಗಿ ಭಾರತೀಯ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ ಪೂಂಛ್ ನಲ್ಲಿ ಮಧ್ಯಾಹ್ನ ನಡೆದ ಈ ಹೊಂಚುದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು ಮೂವರು ಗಾಯಗೊಂಡಿದ್ದಾರೆ. ಭಯೋತ್ಪಾದಕರು ದಾಳಿ ಸ್ಥಳದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದು, ಇದರಲ್ಲಿ ಅತ್ಯಾಧುನಿಕ ಯುಎಸ್ ನಿರ್ಮಿತ ಎಂ4 ಕಾರ್ಬೈನ್ ರೈಫಲ್‌ಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.

ದಾಳಿಯ ತನಿಖೆಗಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ನಾಲ್ಕು ಸದಸ್ಯರ ತಂಡವು ಜಮ್ಮುವಿನ ರಜೌರಿಗೆ ತಲುಪಿದೆ. ಭದ್ರತಾ ಸಿಬ್ಬಂದಿ ಡೇರಾ ಬೀದಿಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಭಯೋತ್ಪಾದಕ ದಾಳಿಯ ಪ್ರಕರಣಕ್ಕೆ ಸಂಬಂಧಿಸಿ ಸೇನೆಯು ಕೆಲವು ಸ್ಥಳೀಯ ಶಂಕಿತರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.M4 ಬಂದೂಕು ಹಗುರವಾದ, ಅನಿಲ-ಚಾಲಿತ, ಮ್ಯಾಗಜೀನ್-ಫೆಡ್ ಕಾರ್ಬೈನ್ ಆಗಿದ್ದು, 1980 ರ ದಶಕದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಯಿತು. ಇದು ಅಮೇರಿಕ ಸಶಸ್ತ್ರ ಪಡೆಗಳ ಆಯುಧವಾಗಿದೆ ಮತ್ತು 80 ಕ್ಕೂ ಹೆಚ್ಚು ದೇಶಗಳು ಇದನ್ನು ಬಳಸುತ್ತಿದೆ ಎಂದು ಹೇಳಲಾಗಿದೆ.