ಐಎಂಎ ವಂಚನೆ ಪ್ರಕರಣ: ಉಡುಪಿಯಲ್ಲೂ ಪ್ರಕರಣ ದಾಖಲು

ಉಡುಪಿ: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲೂ ಮೊದಲ‌ ಪ್ರಕರಣ ದಾಖಲಾಗಿದೆ.
ಕೆಮ್ಮಣ್ಣು ತೋನ್ಸೆಯ ಇಸ್ಮಾಯೀಲ್ ಎಂಬವರ ಪತ್ನಿ ಎಸ್.ಕೆ.ನಾಹಿದಾ (30) ಎಂಬವರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಐಎಂಎ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಸಲು ಮೊತ್ತದ ಜತೆ ತಿಂಗಳಿಗೆ 3.1% ಬಡ್ಡಿ/ಲಾಭಾಂಶ ನೀಡುವುದಾಗಿ ಸಂಬಂಧಿಕರಿಂದ ತಿಳಿದು  2018ರ ಡಿ.21ರಂದು ಪಾಲು ಬಂಡವಾಳದ(ಶೇರ್) ಮೊತ್ತ 1,000 ರೂ. ಹಾಗೂ ಡೆಪೋಸಿಟ್ ಆಗಿ 30,000 ರೂ. ಮತ್ತು 20,000 ರೂ.ವನ್ನು ನೆಫ್ಟ್ ಮೂಲಕ ಹೂಡಿಕೆ ಮಾಡಿದ್ದಾರೆ.
ಈ ಬಗ್ಗೆ ಶೇರ್ ಸರ್ಟಿಫಿಕೇಟ್ ಮತ್ತು ಪಾಸ್ಬುಕ್ ಅಂಚೆ ಮೂಲಕ, 2019ರ ಜ. 31ರಂದು 1,250ರೂ. ಹಾಗೂ 2019ರ ಫೆ.28ರಂದು 1,278.13 ಬಡ್ಡಿ/ಲಾಭಾಂಶ ಜಮೆ ಆಗಿತ್ತು.
ಆ ಬಳಿಕ ಬಡ್ಡಿ/ಲಾಭಾಂಶ ನೀಡದೇ ಮತ್ತು ಅಸಲು ಹೂಡಿಕೆಯ ಹಣ ಹಿಂದಿರುಗಿಸದೆ ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.