‘ನಾನಿನ್ನೂ ಸಿಂಗಲ್, ಮದುವೆಯಾಗಲು ಇಷ್ಟವಿದ್ದವರು ಮೆಸೇಜ್ ಮಾಡಿ’, ಭರ್ಜರಿ ಆಫರ್ ಕೊಟ್ಟ ಬೋಲ್ಡ್ ನಟಿ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಒಂದು ಕಾಲದ ಜನಪ್ರಿಯ ನಟಿ, ‘ಹುಚ್ಚ’ ಚಿತ್ರದ ಜಿಂಕೆಮರಿ ಖ್ಯಾತಿಯ ರೇಖಾ ವೇದವ್ಯಾಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಅವರು, ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ ತಮ್ಮ ವೈಯಕ್ತಿಕ ಜೀವನ, ಮದುವೆ ಹಾಗೂ ಸಿನಿಜರ್ನಿ ಕುರಿತು ಮುಕ್ತವಾಗಿ ಮಾತನಾಡಿದ್ದು, ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

“ನನ್ನನ್ನು ನಿಜವಾಗಿಯೂ ಪ್ರೀತಿಸಿ ಮದುವೆಯಾಗಲು ಬಯಸುವವರು ನನ್ನ ಇನ್‌ಸ್ಟಾಗ್ರಾಂ ಖಾತೆಗೆ ನೇರವಾಗಿ ಡೈರೆಕ್ಟ್ ಮೆಸೇಜ್ (DM) ಮಾಡಿ. ನಿಜವಾದ ಉದ್ದೇಶದಿಂದ ಬಂದ ಸಂದೇಶಗಳಿಗೆ ಖಂಡಿತ ಉತ್ತರಿಸುತ್ತೇನೆ” ಎಂದು ರೇಖಾ ಹೇಳಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಸಾಕಷ್ಟು ಜನರಿಗೆ ನನಗೆ ಈಗಾಗಲೇ ಮದುವೆಯಾಗಿದೆ ಅಥವಾ ನನ್ನ ಜೀವನದಲ್ಲಿ ಯಾರೋ ಇದ್ದಾರೆ ಎಂಬ ಭಾವನೆ ಇದೆ. ಆದರೆ ಅದು ಸತ್ಯವಲ್ಲ. ನಾನು ಇನ್ನೂ ಸಂಪೂರ್ಣ ಸಿಂಗಲ್ ಎಂದು ರೇಖಾ ಸ್ಪಷ್ಟಪಡಿಸಿದರು.

ಇಷ್ಟು ವರ್ಷ ಮದುವೆಯಾಗದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಅವರು, “ಬಹುಶಃ ಇಡೀ ದೇಶದಲ್ಲಿ ಸಲ್ಮಾನ್ ಖಾನ್ ನಂತರ ಮದುವೆಯಾಗದೇ ಉಳಿದಿರುವ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಾನೇ ಇರಬಹುದು” ಎಂದು ನಗಿಸಿದರು.

“ಒಬ್ಬನನ್ನು ಇಷ್ಟಪಟ್ಟಿದ್ದೆ… ಆದರೆ ಹೇಳಲಿಲ್ಲ”

ತಮ್ಮ ಹಳೆಯ ಪ್ರೇಮಕತೆಯನ್ನೂ ಹಂಚಿಕೊಂಡ ರೇಖಾ, “ಒಮ್ಮೆ ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಆದರೆ ಆ ವಿಷಯವನ್ನು ಅವನಿಗೆ ಹೇಳುವ ಧೈರ್ಯ ಮಾಡಲಿಲ್ಲ. ನನ್ನಂತೆ ಯಾರೂ ಮೌನವಾಗಿರಬೇಡಿ. ಇಷ್ಟವಾದರೆ ತಕ್ಷಣ ಹೇಳಿಬಿಡಿ” ಎಂದು ಯುವಕರಿಗೆ ಸಲಹೆ ನೀಡಿದರು.

“ಪತಿ ಹೇಗಿರಬೇಕು?”

“ಯಾರೂ ಪರಿಪೂರ್ಣರಲ್ಲ. ನಾನು ಕೂಡ ಅಲ್ಲ. ಆದ್ದರಿಂದ ನನಗೆ ಬಣ್ಣ, ರೂಪ ಮುಖ್ಯವಲ್ಲ. ನನ್ನನ್ನು ನನ್ನಂತೆಯೇ ಪ್ರೀತಿಸುವ ಒಳ್ಳೆಯ ಮನಸ್ಸಿನ ವ್ಯಕ್ತಿ ಸಿಕ್ಕರೆ ಸಾಕು. ನಾನು 5.6 ಅಡಿ ಎತ್ತರ ಇದ್ದೇನೆ. ನನಗಿಂತ ಸ್ವಲ್ಪ ಎತ್ತರ ಇದ್ದರೆ ಚೆನ್ನಾಗಿರುತ್ತದೆ” ಎಂದು ತಮಾಷೆಯ ಶೈಲಿಯಲ್ಲಿ ಹೇಳಿದರು.

ಚಿತ್ರರಂಗದಿಂದ ದೂರವಾಗಲು ಕಾರಣವೇನು?

‘ಹುಚ್ಚ’, ‘ಹುಡುಗಾಟ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದ ರೇಖಾ ವೇದವ್ಯಾಸ್, 2014ರ ಬಳಿಕ ಚಿತ್ರರಂಗದಿಂದ ದೂರವಾಗಿದ್ದರು. ಈ ಬಗ್ಗೆ ಮಾತನಾಡಿದ ಅವರು, “ನಾನು ಉದ್ದೇಶಪೂರ್ವಕವಾಗಿ ಬ್ರೇಕ್ ತೆಗೆದುಕೊಂಡಿಲ್ಲ. ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದ ಕಾರಣ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಕಷ್ಟ ಅನುಭವಿಸಿದೆ. ಚೇತರಿಸಿಕೊಳ್ಳಲು ಸುಮಾರು ಮೂರು ವರ್ಷ ಬೇಕಾಯಿತು. ಆ ಸಮಯದಲ್ಲಿ ತುಂಬಾ ತೂಕ ಇಳಿದಿತ್ತು. ಈಗ ಸಂಪೂರ್ಣ ಗುಣಮುಖಳಾಗಿದ್ದು, ಮತ್ತೆ ಸಿನಿಮಾಗಳಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದೇನೆ. ಚಿತ್ರರಂಗದ ಬೆಂಬಲ ಸಿಕ್ಕರೆ ಖುಷಿಯಾಗುತ್ತದೆ” ಎಂದು ಹೇಳಿದರು.