ಅಕ್ರಮ ರೊಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ: ಸುಪ್ರೀಂ ಕೋರ್ಟಿಗೆ ನಿಲುವು ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಅಕ್ರಮ ರೊಹಿಂಗ್ಯಾ (Illegal Rohingyas) ಮುಸ್ಲಿಂ ವಲಸಿಗರ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಅಕ್ರಮ ರೋಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ವಾಸಿಸಲು ಮತ್ತು ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ(Union Government) ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.

ಕಾನೂನುಬಾಹಿರವಾಗಿ ದೇಶವನ್ನು ಪ್ರವೇಶಿಸುವವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲು ನ್ಯಾಯಾಂಗವು ಪ್ರತ್ಯೇಕ ವರ್ಗವನ್ನು ರಚಿಸಲು ಸಾಧ್ಯವಿಲ್ಲ, ಸಂಸತ್ತು ಮತ್ತು ಕಾರ್ಯಾಂಗದ ನೀತಿ ನಿರ್ಧಾರಗಳನ್ನು ಅತಿಕ್ರಮಿಸಬಾರದು ಎಂದು ಅದು ಹೇಳಿದೆ.

ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ಸರ್ಕಾರ, ಸಂವಿಧಾನದ 21 ನೇ ವಿಧಿಯಡಿಯಲ್ಲಿ ವಿದೇಶಿಗರು ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಅನುಭವಿಸುತ್ತಿದ್ದರೆ, ದೇಶದಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕು ಭಾರತೀಯ ನಾಗರಿಕರಿಗೆ ಮಾತ್ರ ಮೀಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕೆಲವು ರೋಹಿಂಗ್ಯಾ ಮುಸ್ಲಿಮರು ನಿರಾಶ್ರಿತರ ಸ್ಥಾನಮಾನವನ್ನು ಹೊಂದಲು ಪಡೆದಿರುವ UNHCR ನಿರಾಶ್ರಿತರ ಕಾರ್ಡ್‌ಗಳನ್ನು ಭಾರತ ಗುರುತಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

“ಭಾರತಕ್ಕೆ ರೋಹಿಂಗ್ಯಾಗಳ ಅಕ್ರಮ ವಲಸೆಯ ಮುಂದುವರಿಕೆ ಮತ್ತು ಭಾರತದಲ್ಲಿ ಅವರ ವಾಸ್ತವ್ಯವು ಸಂಪೂರ್ಣವಾಗಿ ಕಾನೂನುಬಾಹಿರವಾಗಿರುವುದರ ಜೊತೆಗೆ, ಗಂಭೀರವಾದ ಭದ್ರತಾ ಪರಿಣಾಮಗಳಿಂದ ಕೂಡಿದೆ” ಎಂದು ಸರ್ಕಾರ ಹೇಳಿದೆ.

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಂತಹ ಕೆಲವು ಗಡಿ ರಾಜ್ಯಗಳ ಜನಸಂಖ್ಯಾ ಸ್ವರೂಪವನ್ನು ಬದಲಿಸಿದ ನೆರೆಯ ದೇಶಗಳಿಂದ, ವಿಶೇಷವಾಗಿ ಬಾಂಗ್ಲಾದೇಶದಿಂದ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದ ಎದುರಾಗುವ ಸವಾಲುಗಳನ್ನು ಸರ್ಕಾರದ ಪ್ರಮಾಣಪತ್ರವು ಎತ್ತಿ ತೋರಿಸಿದೆ. ರೊಹಿಂಗ್ಯಾಗಳು ನಕಲಿ/ಕೃತಕ ಭಾರತೀಯ ಗುರುತಿನ ದಾಖಲೆಗಳನ್ನು ಪಡೆಯುವುದು, ಮಾನವ ಕಳ್ಳಸಾಗಣೆ ಮತ್ತು ದೇಶಾದ್ಯಂತ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಗುಪ್ತಚರ ಸಂಸ್ಥೆಗಳ ಬಳಿ ಪುರಾವೆ ಇರುವುದಾಗಿ ಸರ್ಕಾರ ತಿಳಿಸಿದೆ.

ಬಂಧಿತ ರೋಹಿಂಗ್ಯಾಗಳ ಬಿಡುಗಡೆಗಾಗಿ ಅರ್ಜಿದಾರರಾದ ಪ್ರಿಯಾಲಿ ಸುರ್ ಅವರ ಮನವಿಗೆ ಪ್ರತಿಕ್ರಿಯೆಯಾಗಿ, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವವರ ವಿರುದ್ಧ ವಿದೇಶಿಯರ ಕಾಯ್ದೆಯ ನಿಬಂಧನೆಗಳ ಪ್ರಕಾರ ವ್ಯವಹರಿಸಲಾಗುವುದು ಎಂದು ಸರ್ಕಾರ ಪುನರುಚ್ಚರಿಸಿತು. 1951 ರ ನಿರಾಶ್ರಿತರ ಸಮಾವೇಶ ಮತ್ತು ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದ ಶಿಷ್ಟಾಚಾರಗಳಿಗೆ ಭಾರತವು ಸಹಿ ಹಾಕದ ಕಾರಣ, ತನ್ನದೇ ಆದ ದೇಶೀಯ ಚೌಕಟ್ಟಿನ ಆಧಾರದ ಮೇಲೆ ರೋಹಿಂಗ್ಯಾಗಳ ಸಮಸ್ಯೆಯನ್ನು ನಿಭಾಯಿಸುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.

ರೊಹಿಂಗ್ಯಾಗಳನ್ನು ಟಿಬೆಟ್ ಮತ್ತು ಶ್ರೀಲಂಕಾದ ನಿರಾಶ್ರಿತರಿಗೆ ಸಮಾನವಾಗಿ ಪರಿಗಣಿಸಬೇಕೆಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ ಸರ್ಕಾರ, “ಯಾವುದೇ ವರ್ಗದ ವ್ಯಕ್ತಿಗಳನ್ನು ನಿರಾಶ್ರಿತರೆಂದು ಗುರುತಿಸಬೇಕೆ ಅಥವಾ ಇಲ್ಲವೇ ಎಂಬುದು ಶುದ್ಧ ನೀತಿ ನಿರ್ಧಾರವಾಗಿದೆ. ನಿರಾಶ್ರಿತರ ಸ್ಥಾನಮಾನವನ್ನು ಹೊರಗೆ ಗುರುತಿಸಲು ಸಾಧ್ಯವಿಲ್ಲ. ಶಾಸಕಾಂಗ ಚೌಕಟ್ಟಿನ ಹೊರಗೆ ನಿರಾಶ್ರಿತರ ಸ್ಥಾನಮಾನದ ಯಾವುದೇ ಮಾನ್ಯತೆ ಇರಬಾರದು ಮತ್ತು ನ್ಯಾಯಾಂಗ ಆದೇಶದ ಮೂಲಕ ನಿರಾಶ್ರಿತರ ಸ್ಥಾನಮಾನದ ಘೋಷಣೆಯನ್ನು ಮಾಡಲಾಗುವುದಿಲ್ಲ … ಸಮಾನತೆಯ ಹಕ್ಕು ವಿದೇಶಿಯರಿಗೆ ಮತ್ತು ಅಕ್ರಮ ವಲಸಿಗರಿಗೆ ಲಭ್ಯವಿಲ್ಲ” ಎಂದು ಸರ್ಕಾರ ಪ್ರತಿಪಾದಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.