ಅಕ್ರಮ ಕೆಂಪುಕಲ್ಲು ಗಣಿಗಾರಿಕೆ: ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಬೈಂದೂರು ತಾಲ್ಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು ಬುಧವಾರ ದಾಳಿ ನಡೆಸಿ, ₹16 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಲ್ತೋಡು ಬೀಟ್ ಅಧಿಕಾರಿಯಿಂದ ದೊರೆತ ಮಾಹಿತಿಯ ಮೇರೆಗೆ ಬೈಂದೂರು ಠಾಣೆಯ ಪಿಎಸ್‌ಐ ಸುನಿಲ್ ಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡು, ಸೆ.23ರಂದು ಮಧ್ಯಾಹ್ನ 1.15ಕ್ಕೆ ದಾಳಿ ನಡೆಸಿದರು.

ಈ ವೇಳೆ ಕೆಂಪುಕಲ್ಲು ತುಂಬಿದ್ದ ಎರಡು ಟಿಪ್ಪರ್‌ಗಳು, ಬ್ಲೇಡ್ ಅಳವಡಿಸಿದ ಎರಡು ಪವರ್ ಟಿಲ್ಲರ್ ಯಂತ್ರಗಳು ಹಾಗೂ ಎರಡು ಕಲ್ಲು ಎತ್ತುವ ಟ್ರಾಲಿ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹16 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ರವೀಂದ್ರ ಪೂಜಾರಿ ಹಾಗೂ ಸತೀಶ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.