ಸಿಂಪಲ್ಲಾಗೊಂದು ಕ್ರಶ್ ಸ್ಟೋರಿ: ಇಫಾಜ್ ಬರೆದ LOVE ಲಿ ಬರಹ

ಈ ಪ್ರೀತಿ ಎಂಬುದು ಒಂತರಾ ಮಾಯೆ, ಅದು ಹೊತ್ತು-ಗೊತ್ತು, ಜಾತಿ-ಧರ್ಮ ನೋಡದೆ ಹುಟ್ಟೋ ಪ್ರೇಮಲೋಕ. ಅಂದೊಮ್ಮೆ ಅವಳ ಕಣ್ಣು, ನಗು, ಅದರ ಜೊತೆಗೆ ಗುಲಾಬಿಯೇ ನಾಚಿಕೊಳ್ಳುವಂಹ  ತುಟಿ, ಕಣ್ಣಿನ ಮೇಲಿನ ಕಪ್ಪು ನೋಡಿದಾಗೆಲ್ಲ ಮನವೆಲ್ಲ ಕೆಂಪಾಗುವ ಜೊತೆಗೆ, ಅಪ್ಸರೆ ನಾಚುವಂತೆ ಇದ್ದ ಅವಳ ನಡೆ, ಇದನ್ನೆಲ್ಲ ನೋಡಿ ನನ್ನ ಮನಸ್ಸು ಅವಳ ಹಿಂದೆ ಹೋಗುವಂತೆ ಮಾಡಿತು ಎಂದು ನೀವಂದುಕೊಂಡರೆ ಅದು ಸುಳ್ಳು.

ಈಗಿನ ಕಾಲದಲ್ಲಿ ಸ್ಟೈಲ್ ಅನ್ನೋದು ರಕ್ತದಲ್ಲಿಯೇ ಹರಿಯತೊಡಗಿದೆ. ಇಂತಹ ಸ್ಟೈಲ್ ಗೆಲ್ಲ ಮರಳಾಗೋ ಹುಡುಗ ಅಂತೂ ನಾನಲ್ಲ. ನನ್ನ ಮೊದಲ ಕ್ರಶ್ ಇದಕ್ಕಿಂತಲೂ ಡಿಫರೆಂಟ್. ಅವಳ ನಗು ,ಬಣ್ಣ, ಕಣ್ಣಿನ ಕಾಡಿಗೆಗಳಿಗೆಲ್ಲಾ ಮನಸೋಲದೇ ಅವಳ ಮನಸ್ಸಿನ ಮುಗ್ಧತೆಗೆ, ಸರಳತೆಗೆ ಕಳೆದು ಹೋದೆ. ಅವಳ ಮುಗ್ಧತೆಗೆ ನನ್ನ ಮನವೇ ಮಂದಾಯಿತು. ಅವಳನ್ನೇ ಅರಸಿ ಅವಳೇ ನನ್ನ ಅರಸಿ ಎಂದು ನನ್ನ ಮನ ಹಾತೊರೆಯತೊಡಗಿತು. ಇದನ್ನೆಲ್ಲ ನೋಡಿದಾಗ ಗೊತ್ತಾಯ್ತು ಇದು ಪ್ರೀತಿಯ ತಳಪಾಯವೆಂದು.

ಏನ್ ಮಾಡೋದು, ನನ್ನ ವಯಸ್ಸೇ ಹಾಗೇ ಮನಸೂ ಅವಳನ್ನೇ ಬಯಸಿದೆ. ಅಷ್ಟಕ್ಕೂ ಆ ಹುಡುಗಿ ನನ್ನ ಕಾಲೇಜಿನಲ್ಲೆ, ನನ್ನ ಪಕ್ಕದ ತರಗತಿಯಲ್ಲೇ ಓದುತ್ತಿದ್ದದು ನನ್ನ ಅದೃಷ್ಟ. ಅಷ್ಟೇನೂ ಹರಸಾಹಸ ಪಡದೇ, ಮನಸ್ಸು ಹಂಬಲಿಸಿದಾಗಲೆಲ್ಲಾ ಕತ್ತನ್ನು ತಿರುಗಿಸಿ ಹಾಗೆ ನೋಡಿ ಖುಷಿ ಪಡೆದುಕೊಳ್ಳುತ್ತಿದ್ದೆ. ದಿನ ಹೋದಂತೆಲ್ಲಾ ಪ್ರೀತಿಯ ಹಸಿವು ಜೋರಾಯಿತು. ಮನಸ್ಸಿನಲ್ಲಿಯೆ ಬಚ್ಚಿಡಲಾಗದೆ ಅವಳ ಮುಂದೆ ತೋಡಿಕೊಳ್ಳುವ ಸಾಹಸವನ್ನು ತೆಗೆದುಕೊಂಡೆ. ಆದರೆ ಹೇಗೆ ಹೇಳೋದು ಅನ್ನೋದೇ ಒಂದು ದೊಡ್ಡ ತಲೆಬಿಸಿ, ಅದರ ಜೊತೆಗೆ ಒಂದು ವೇಳೆ ಹೇಳಿಕೊಂಡರೂ ಒಪ್ಪುತ್ತಾಳೋ, ಇಲ್ಲವೋ ಅನ್ನೊದು ಅದಕ್ಕಿಂತ ದೊಡ್ಡ ತಲೆ ಬಿಸಿಯಾಗಿತ್ತು. ಅಂತೂ ಹಾಗೋ, ಹೀಗೋ ಮಾಡಿ ಒಂದಿನ ಅವಳ ಎದುರು ನಿಂತು ನನ್ನ ಮನಸ್ಸಿನ ಮಾತುಗಳ ಮಳೆಯನ್ನೇ ಅವಳ ಮೇಲೆ ಸುರಿಸಿದೆ. ಆ ಪ್ರೀತಿಯ ಮಳೆ ಕರಗಿ ನೀರಾಗಿ ಆಕೆ ಅಂದೇ ನನ್ನವಳಾಗಲು ಒಪ್ಪಿದಳು. ಅಂದಿನಿಂದ ಇಂದಿನವರೆಗೂ ಮುಂದೆಂದಿಗೂ ನಿನಗೆ ನಾನು, ನನಗೆ ನೀನು ಎನ್ನುತ್ತಾ ಪ್ರೇಮ ಲೋಕದ ಪ್ರೇಮಿಗಳಾಗಿದ್ದೇವೆ.

        ಇಫಾಜ್                   ಪತ್ರಿಕೋದ್ಯಮ ವಿಭಾಗ, ಎಂ.ಪಿ.ಎಂ.ಕಾಲೇಜು,ಕಾರ್ಕಳ