ಫಟನೆ 1: ಟ್ರೇನ್ ನಲ್ಲಿ ಬಹುದೂರದ ಪಯಣ ಕೈಗೊಂಡಿದ್ದ ದಂಪತಿಗಳು ಸ್ಲೀಪರ್ ಕೋಚ್ ಬುಕ್ ಮಾಡಿ ಸುರಕ್ಷಿತ ಪಯಣ ಮಾಡುವ ಧೈರ್ಯ ಹೊಂದಿದ್ದರು. ಆದರೆ ಯಾವುದೋ ಒಂದು ನಿಲ್ದಾಣದಲ್ಲಿ ಸಾಕಷ್ಟು ಲಗೇಜ್ ಗಳೊಂದಿಗೆ ಹತ್ತಿದ ಐದಾರು ಯುವಕರು ಜಾಗ ಖಾಲಿ ಇದ್ದೆಡೆಯಲ್ಲೆಲ್ಲಾ ಅವರ ಲಗೇಜ್ ತುರುಕಿಸಿ ಇಟ್ಟು ಅರಾಮವಾಗಿ ನಮ್ಮದೇಬೋಗಿ ಎಂಬಂತೆ ಹರಟೆ ಹೊಡೆಯುತ್ತಾ ನೆಲದ ಮೇಲೆ ಕುಳಿತು ಬಿಟ್ಟರು. ಇತರ ಪ್ರಯಾಣಿಕರ ಪ್ರಶ್ನೆಗಳಿಗೂ ಉತ್ತರಿಸದೇ ತಮ್ಮಷ್ಟಕ್ಕೆ ತಾವಿದ್ದರು. ಯಂಗ್ ಟಿಟಿಇ ಅವರೊಂದಿಗೆ ನಗುತ್ತಲೇ ಮಾತಾಡಿ ಮುಂದಿನ ಬೋಗಿಗೆ ಹೋದರು.
ಆದರೆ ಸ್ವಲ್ಪ ಸಮಯದಲ್ಲೇ ಅವರ ಮಾತು, ನಡವಳಿಕೆಗಳು ಸೀಟ್ ಕಾಯ್ದಿರಿಸಿ ರೈಲು ಹತ್ತಿದ್ದ ಪ್ರಯಾಣಿಕರಿಗೆ ಹಿಂಸೆಯಾಗತೊಡಗಿತು. ಈ ಸಂದರ್ಭದಲ್ಲಿ ಒಬ್ಬರು ರೈಲ್ವೇ ಇಲಾಖೆಗೆ ದೂರು ನೀಡಿದ್ದು, ಪವಾಡದ ರೀತಿಯಲ್ಲಿ ಮುಂದಿನ ನಿಲ್ದಾಣದಲ್ಲೇ ರೈಲ್ವೇ ಪೊಲೀಸ್ ಅವರೆಲ್ಲರನ್ನೂ ವಿಚಾರಿಸಿ ಜನರಲ್ ಟಿಕೆಟ್ ತೆಗೆದುಕೊಂಡು ಅನಧಿಕೃತವಾಗಿ ಸ್ಲೀಪರ್ ಕೋಚ್ ನಲ್ಲಿ ಚಲಿಸುತ್ತಿದ್ದ ಅವರ ಮೇಲೆ ಕೂಡಲೇ ಕ್ರಮಕೈಗೊಂಡರು.
ಫಟನೆ 2: ಟ್ರೈನ್ ನಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರ ಮೊಬೈಲ್ ಫೋನ್ ಆಕಸ್ಮಿಕವಾದ ಸಮಸ್ಯೆಯಿಂದಾಗಿ ಸ್ವಿಚ್ ಆಫ್ ಆಗಿದ್ದು, ಮನೆಯವರು ತುರ್ತು ಕರೆ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಕರೆ ಕನೆಕ್ಟ್ ಆಗಲಿಲ್ಲ. ಆದ್ದರಿಂದ ಗಾಬರಿಗೊಂಡ ಕುಟುಂಬ ಸದಸ್ಯರು, ರೈಲ್ವೇ ಸಹಾಯವಾಣಿ ಸಂಪರ್ಕಿಸಿ ವಿಷಯ ತಿಳಿಸಿದಾಗ ತಕ್ಷಣವೇ ರೈಲ್ವೇ ಪೊಲೀಸರು ಆ ಮಹಿಳೆಯ ಬೋಗಿ ಹುಡುಕಿ ಅವರಿದ್ದ ಸೀಟಿಗೆ ಬಂದು ಮನೆಯವರು ತಿಳಿಸಿದ ವಿಚಾರ ತಿಳಿಸಿ ಕೂಡಲೇ ಮನೆಯ ಸದಸ್ಯರಿಗೆ ಫೋನ್ ಕರೆ ಮಾಡಿ ಆಕೆ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದರು.
ಈ ಎರಡೂ ಘಟನೆಗಳು ರೈಲ್ವೇ ಇಲಾಖೆಯ ಪ್ರಯಾಣಿಕರ ಸೇವೆ, ಸುರಕ್ಷತೆಗೆ ಕೈಗೊಳ್ಳುವ ಕ್ರಮ, ಸಮಸ್ಯೆಗಳಿಗೆ ನೀಡುವ ತಕ್ಷಣದ ಪರಿಹಾರದ ದಕ್ಷತೆಯನ್ನು ಎತ್ತಿ ಹಿಡಿಯುತ್ತದೆ.
ರೈಲಿನಲ್ಲಿ ಏನಾದರೂ ಸಮಸ್ಯೆ ಉಂಟಾದಾಗ ಹೀಗೆ ಮಾಡಿ
- 139 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು
- Rail One app ಡೌನ್ ಲೋಡ್ ಮಾಡಿಟ್ಟುಕೊಂಡು Rail Madad ಮೂಲಕ ದೂರು ನೀಡಬಹುದು.
ಅವರು ಕೇಳಿದ ಎಲ್ಲಾ ಮಾಹಿತಿಗಳನ್ನು ಸಮರ್ಪಕವಾಗಿ ಒದಗಿಸಿದರೆ ತಕ್ಷಣದಲ್ಲಿ ನಿಮ್ಮ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೇ ಕ್ರಮ ಕೈಗೊಳ್ಳುತ್ತಿರವ ಹಂತಗಳ ಬಗ್ಗೆಯೂ ನಿಮಗೆ ಆಗಾಗ ಟೆಕ್ಸ್ಟ್ ಮೆಸೇಜ್ ಬರುತ್ತದೆ. ಹಾಗಾಗಿ ಇನ್ನು ಮುಂದೆ ರೈಲಿನಲ್ಲಿ ಸಂಚರಿಸುವಾಗ ಸುರಕ್ಷತೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ರೈಲ್ವೇ ಇಲಾಖೆ ನಿಮ್ಮ ಸುರಕ್ಷತೆಯ ಕಾಳಜಿ ವಹಿಸುತ್ತದೆ.

















