ಬೆಂಗಳೂರು: ಇನ್ಮುಂದೆ ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸಿದರೆ ಪ್ರಯಾಣಿಕರು ಭಾರೀ ದಂಡ ತೆರಬೇಕಾಗುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹೊಸ ದಂಡದ ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ನಿಯಮಗಳ ಪ್ರಕಾರ, ಮೆಟ್ರೋ ಟ್ರ್ಯಾಕ್ಗೆ ಜಿಗಿಯುವುದು, ಟ್ರ್ಯಾಕ್ ಮೇಲೆ ಓಡಾಡುವುದು, ಟಿಕೆಟ್ ಅಥವಾ ಪಾಸ್ಗಳ ದುರ್ಬಳಕೆ ಮಾಡಿದರೆ ₹5,000ರಿಂದ ₹25,000ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಮೆಟ್ರೋ ರೈಲು ಅಥವಾ ನಿಲ್ದಾಣಗಳಲ್ಲಿ ಅನುಮತಿಯಿಲ್ಲದೆ ವ್ಯಾಪಾರ ನಡೆಸಿದರೂ ₹5,000 ದಂಡ ಪಾವತಿಸಬೇಕಾಗುತ್ತದೆ.
ಇದುವರೆಗೆ ಮೆಟ್ರೋದಲ್ಲಿ ರೀಲ್ಸ್ ಮಾಡುವುದು, ಆಹಾರ ಸೇವಿಸುವುದು, ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ಜೋರಾಗಿ ಸಂಗೀತ ಹಾಕಿ ಇತರರಿಗೆ ತೊಂದರೆ ನೀಡುವುದು ಸೇರಿದಂತೆ ಕೆಲವು ಉಲ್ಲಂಘನೆಗಳಿಗೆ ₹500 ದಂಡ ವಿಧಿಸಲಾಗುತ್ತಿತ್ತು. ಹೊಸ ನಿಯಮದಂತೆ ಇದೇ ಕೃತ್ಯಗಳಿಗೆ ₹2,500ರಿಂದ ₹10,000ವರೆಗೆ ದಂಡ ವಿಧಿಸಲಾಗುತ್ತದೆ.
ಇನ್ನು ಮೆಟ್ರೋ ನಿಲ್ದಾಣದ ಗೋಡೆಗಳ ಮೇಲೆ ಬರೆಯುವುದು, ಪೋಸ್ಟರ್ ಅಂಟಿಸುವುದು ಅಥವಾ ಚಿತ್ರ ಬಿಡಿಸುವುದು ಮೊದಲಾದ ಕೃತ್ಯಗಳಿಗೆ ವಿಧಿಸಲಾಗುತ್ತಿದ್ದ ₹1,000 ದಂಡವನ್ನು ₹10,000ಕ್ಕೆ ಹೆಚ್ಚಿಸಲಾಗಿದೆ.
ಅದೇ ರೀತಿ ಮದ್ಯಪಾನ ಮಾಡಿ ಪ್ರಯಾಣಿಸುವುದು, ಜಗಳವಾಡುವುದು ಅಥವಾ ಉಗುಳುವುದು ಸೇರಿದಂತೆ ಸೆಕ್ಷನ್ 59(1) ಅಡಿಯಲ್ಲಿ ಬರುವ ಉಲ್ಲಂಘನೆಗಳಿಗೆ ₹500 ಬದಲಿಗೆ ₹2,500 ದಂಡ ವಿಧಿಸಲಾಗುತ್ತದೆ.
ಇದಲ್ಲದೆ, ಪಟಾಕಿ, ಸ್ಫೋಟಕ ವಸ್ತುಗಳು ಅಥವಾ ಅಪಾಯಕಾರಿ ರಾಸಾಯನಿಕಗಳನ್ನು ಮೆಟ್ರೋದಲ್ಲಿ ಸಾಗಿಸಿದರೆ ಸೆಕ್ಷನ್ 60(1) ಅನ್ವಯ ₹2,500 ದಂಡ ವಿಧಿಸಲಾಗುತ್ತದೆ.
ಬಿಎಂಆರ್ಸಿಎಲ್ ಮಾಹಿತಿ ಪ್ರಕಾರ, ಈ ಎಲ್ಲಾ ದಂಡದ ಮೊತ್ತವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ.10ರಷ್ಟು ಹೆಚ್ಚಿಸಲಾಗುವುದು.















