ನೀವು ಧೂಮಪಾನ ಮಾಡ್ತೀರಾ?ಹಾಗಾದ್ರೆ ಭವಿಷ್ಯದಲ್ಲಿ ನಿಮ್ಮ ಮೊಮ್ಮಗಳು ದಢೂತಿಯಾಗ್ತಾರಂತೆ!

ನವದೆಹಲಿ: ನೀವು ಧೂಮಪಾನ ಮಾಡ್ತೀರಾ? ಹಾಗಾದ್ರೆ ಭವಿಷ್ಯದಲ್ಲಿ ನಿಮ್ಮ ಮೊಮ್ಮಗಳು ದಢೂತಿಯಾಗ್ತಾರಂತೆ! ಹೌದು. ಪ್ರೌಢಾವಸ್ಥೆಗೆ ಮುನ್ನ ಅಜ್ಜ ಅಥವಾ ಮುತ್ತಜ್ಜರು ಧೂಮಪಾನ ಮಾಡುತ್ತಿದ್ದರೆ ಅದು ಮಹಿಳೆಯರು ಮತ್ತು ಹುಡುಗಿಯರ ಮೇಲೆ ಪರಿಣಾಮ ಬೀರುತ್ತದಂತೆ. ಇದು  ಸ್ಥೂಲಕಾಯವಾಗುವಂತೆ ಮಾಡುತ್ತದೆ  ಎಂದು ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದ ಅಧ್ಯಯನದಿಂದ ತಿಳಿದು ಬಂದಿದೆ.

ಯುನೈಟೆಡ್ ಕಿಂಗ್‌ಡಂನಲ್ಲಿ 90ರ ದಶಕದ 30 ವರ್ಷದ ಮಕ್ಕಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಸಂಗತಿ  ಬಹಿರಂಗವಾಗಿದೆ. ಯೌವನಾವಸ್ಥೆಗೆ ಮೊದಲು ಕೆಲವು ರಾಸಾಯನಿಕ ಹಾಗೂ ಕೆಟ್ಟ ಅಭ್ಯಾಸಗಳಿಗೆ ಪುರುಷರು ಒಡ್ಡಿಕೊಳ್ಳುವುದರಿಂದ ಅವುಗಳ ಸಂತತಿಯ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ತಿಳಿಸಿದೆ. ತಂದೆಯ ಅಜ್ಜ ಪ್ರೌಢಾವಸ್ಥೆಯ ಮೊದಲು ಧೂಮಪಾನ ಮಾಡಲು ಪ್ರಾರಂಭಿಸಿದ್ದರೆ, ನಂತರದ ಅವರ ಮೊಮ್ಮಕ್ಕಳ ದೇಹದಲ್ಲಿ ಹೆಚ್ಚುವರಿ ಕೊಬ್ಬು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ತಿಳಿಸಿದೆ.

ಮಾನವರಲ್ಲಿ ಪ್ರಿಪ್ಯುಬರ್ಟಲ್ ಮಾನ್ಯತೆಗಳ ಪರಿಣಾಮಗಳನ್ನು ತನಿಖೆ ಮಾಡಲು, ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 14,000 ವ್ಯಕ್ತಿಗಳಲ್ಲಿ ಪರಿಣಾಮವನ್ನು ಅಧ್ಯಯನ ಮಾಡಿದರು. 13 ವರ್ಷಕ್ಕಿಂತ ಮುಂಚೆಯೇ ಅವರ ತಂದೆಯ ಅಜ್ಜ ಅಥವಾ ಮುತ್ತಜ್ಜರು ಧೂಮಪಾನ ಮಾಡಲು ಪ್ರಾರಂಭಿಸಿದ್ದ ಮಹಿಳೆಯರಲ್ಲಿ ದೇಹದ ಕೊಬ್ಬು ಶೇಖರವಾಗಿರುವುದನ್ನು ಕಂಡುಕೊಂಡರು. ಪುರುಷ ವಂಶಸ್ಥರಲ್ಲಿ ಯಾವುದೇ ಪರಿಣಾಮಗಳನ್ನು ಗಮನಿಸಲಾಗಿಲ್ಲ.