ಜನರ ಮೇಲೆ ಕಾಳಜಿ ಇದ್ದರೆ, ಕೂಡಲೇ ವೈದ್ಯರ ಬೇಡಿಕೆ ಈಡೇರಿಸಿ: ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ ವಿನಯರಾಜ್ ಆಗ್ರಹ

ಮಂಗಳೂರು: ಕೊರೊನಾ ಬಂದಾಗಿನಿಂದಲೂ ವೈದ್ಯರು ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಎನ್ನದೇ ದುಡಿಯುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಮಾತ್ರ ಅವರ ಸಮಸ್ಯೆಗಳಿಗೆ ಸ್ಪಂದಿಸದೆ ಅಸಡ್ಡೆ ತೋರುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ. ವಿನಯರಾಜ್ ದೂರಿದ್ದಾರೆ.

ವೈದ್ಯಾಧಿಕಾರಿಗಳ ಸಂಘವು ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸೆಪ್ಟೆಂಬರ್ 21 ರಿಂದ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಮಯದಲ್ಲಿ ಕೊರೊನಾ ವಾರಿಯರ್ಸ್‌ ಗಳ ಬೇಡಿಕೆಯನ್ನು ತಕ್ಷಣ ಈಡೇರಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ. ವೈದ್ಯಾಧಿಕಾರಿಗಳು ನೀಡಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು ಕೂಡ ರಾಜ್ಯ ಸರ್ಕಾರ ಮಾತ್ರ ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವೈದ್ಯರು ಮುಷ್ಕರ ಮಾಡಿದರೆ, ಕೋವಿಡ್ ಸಂಬಂಧಿಸಿದ ಸೇವೆಗಳು ಕೂಡ ಸ್ಥಗಿತಗೊಳ್ಳಲಿದೆ. ಹಾಗಾಗಿ ಸರ್ಕಾರ ರೋಗಿಗಳ ಜೀವನದ ಜೊತೆ ಚೆಲ್ಲಾಟ ಮಾಡಬಾರದು. ಜನರ ಮೇಲೆ ಕಾಳಜಿ ಇದ್ದರೆ ರಾಜ್ಯ ಸರ್ಕಾರ ಕೂಡಲೇ ವೈದ್ಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ವಿನಯರಾಜ್ ಆಗ್ರಹಿಸಿದ್ದಾರೆ.