‘ಮಂಗಳೂರಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ’ ಕರಾವಳಿಯ ನಂಟು ಬಿಚ್ಚಿಟ್ಟ ಶಾರುಖ್ ಖಾನ್

ಮಂಗಳೂರು : “ನಾನು ಮಂಗಳೂರಿನಲ್ಲೇ ಬೆಳೆದಿದ್ದರೆ, ಇಲ್ಲಿನ ಅಲೋಶಿಯಸ್, ಶಾರದಾ ಅಥವಾ ಅಮೃತಾನಂದಮಯಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಇದೇ ನಗರದಲ್ಲಿ ಶಿಕ್ಷಕನಾಗುತ್ತಿದ್ದೆ” ಎಂದು ಬಾಲಿವುಡ್ ನಟ ಶಾರುಖ್ ಖಾನ್ Shah Rukh Khan ಹೇಳಿದ್ದಾರೆ.

ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ರೋಹನ್ ಕಾರ್ಪೊರೇಷನ್ ಆಯೋಜಿಸಿದ್ದ ಆ್ಯನ್ ಇನ್ನಿಂಗ್ ವಿತ್ ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮಸ್ಕಾರ ಕುಡ್ಡ, ಎಂಚ ಉಲ್ಲರ್” ಎಂದು ತುಳು ಭಾಷೆಯಲ್ಲೇ ಭಾಷಣ ಆರಂಭಿಸಿ ಕರಾವಳಿಯ ಜನರ ಮೆಚ್ಚುಗೆ ಗಳಿಸಿದರು.

ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಶಾರುಖ್ ಖಾನ್, “ನನ್ನ ಅಜ್ಜ ಎನ್‌ಎಂಪಿಟಿಯಲ್ಲಿ ಎಂಜಿನಿಯರ್ ಆಗಿದ್ದರು. 1965-67ರ ಅವಧಿಯಲ್ಲಿ ನಾನು ಪಣಂಬೂರು ಕಡಲತೀರದ ಸುತ್ತಮುತ್ತ ಬಾಲ್ಯದ ದಿನಗಳನ್ನು ಕಳೆದಿದ್ದೆ. ಆಗ ನಾನು ಹಸುಳೆಯಾಗಿದ್ದ ಕಾರಣ ಆ ನೆನಪುಗಳು ಸ್ಪಷ್ಟವಾಗಿ ಇಲ್ಲದಿದ್ದರೂ, ಹಿರಿಯರು ಹೇಳಿದ ಕಥೆಗಳು ಇನ್ನೂ ಮನಸ್ಸಿನಲ್ಲಿ ಉಳಿದಿವೆ” ಎಂದು ಹೇಳಿದರು.

ಈ ವೇಳೆ ತಮ್ಮ ಜೇಬಿನಲ್ಲಿದ್ದ ಬಾಲ್ಯದ ಛಾಯಾಚಿತ್ರವೊಂದನ್ನು ಪ್ರದರ್ಶಿಸಿದ ಅವರು, “ಕರಾವಳಿಯ ಭಾಷೆ, ಸಂಸ್ಕೃತಿ ಮತ್ತು ಆತಿಥ್ಯ ನನ್ನನ್ನು ಸದಾ ಆಕರ್ಷಿಸುತ್ತವೆ. ಮತ್ತೊಮ್ಮೆ ಈ ಮಣ್ಣಿಗೆ ಬರುವ ಅವಕಾಶ ನೀಡಿದ ರೋಹನ್ ಕಾರ್ಪೊರೇಷನ್‌ಗೆ ಧನ್ಯವಾದಗಳು. ಕುಡ್ಲದ ನೀರು ದೋಸೆ ನನಗೆ ತುಂಬಾ ಇಷ್ಟ. ಅದನ್ನು ಸವಿಯಲು ಮತ್ತೆ ಮಂಗಳೂರಿಗೆ ಬರುತ್ತೇನೆ. ಮುಂಬೈ ಮತ್ತು ಕರಾವಳಿಯ ನಡುವಿನ ನಂಟು ಬಹಳ ಹಳೆಯದು. ಕರಾವಳಿಯ ಅನೇಕ ಮಂದಿ ಮುಂಬೈನಲ್ಲಿ ನೆಲೆಸಿದ್ದಾರೆ” ಎಂದು ಹೇಳಿದರು.