ಮಣಿಪಾಲ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯೇ ಕೊನೆಯಾಗಬೇಕು. ಇಲ್ಲದಿದ್ದರೆ, ಹಿಂದೂ ಕಾರ್ಯಕರ್ತರು ಪ್ರತೀಕಾರ ಶುರು ಮಾಡಿದರೆ ನಿಮಗೆ ಈ ದೇಶದಲ್ಲಿ ಉಳಿಯಲು ಕಷ್ಟ ಆಗಬಹುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಎಸ್ಡಿಪಿಐ, ಪಿಎಫ್ ಐ ಕಾರ್ಯಕರ್ತರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜನ ವಿರೋಧಿ ನೀತಿ ವಿರೋಧಿಸಿ ಹಾಗೂ ಹರ್ಷ ಹತ್ಯೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲ ಟೈಗರ್ ಸರ್ಕಲ್ ಬಳಿ ಶನಿವಾರ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.ಎಸ್ ಡಿಪಿಐ ತನ್ನ ವೋಟ್ ಬ್ಯಾಂಕ್ ವಿಸ್ತರಣೆಗೆ ಹಿಜಾಬ್ ವಿವಾದ ಸೃಷ್ಟಿಸಿದೆ. ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಹೋರಾಟ ಮಾಡುತ್ತಿರುವವರು ಮೊದಲು ದೇಶದ ಸಂವಿಧಾನ, ಕಾನೂನಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಲಿ. ಭಾರತದಲ್ಲಿ ಶರಿಯಾತ್ ಕಾನೂನು ಇಲ್ಲ. ಶರಿಯಾತ್ ಕಾನೂನು ಬೇಕಾದವರು ಶರಿಯಾತ್ ಕಾನೂನು ಇರುವ ದೇಶಗಳಿಗೆ ಹೋಗಿ. ಅದು ಬಿಟ್ಟು ಇಲ್ಲಿನ ಸಮಾಜದ ಸ್ವಾಸ್ಥ್ಯ ಹಾಳು ಮಾಡಬೇಡಿ. ಇಲ್ಲಿನ ಜನರಿಗೆ ತೊಂದರೆ ಕೊಡಬೇಡಿ. ಪ್ರಪಂಚದಲ್ಲಿ ಶರಿಯಾತ್ ಕಾನೂನು ಇರುವ ಸಾಕಷ್ಟು ದೇಶಗಳಿವೆ. ಅಲ್ಲಿಗೆ ಹೋಗಲು ಇಚ್ಚಿಸುವವರಿಗೆ ಬಿಜೆಪಿ ಕಾರ್ಯಕರ್ತರು ವ್ಯವಸ್ಥೆ ಮಾಡಿಕೊಡುತ್ತಾರೆ ಎಂದರು.
ಸಮಾಜ ಸ್ವಾಸ್ಥ್ಯ ಹಾಳು ಮಾಡಿ, ಹಿಂದೂಗಳ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ನಾವು ಸುಮ್ಮನೆ ಕೂರುವವರಲ್ಲ, ನಿಮ್ಮ ಮಾತಿನ ಎಲ್ಲೆ ಮೀರಿದರೆ ನಿಮಗೆ ಈ ದೇಶದಲ್ಲಿ ಜೀವಿಸಲು ಕಷ್ಟ ಆಗಬಹುದು ಎಂದು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಾಗೂ ಮತಾಂಧ ಶಕ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಬಿಜೆಪಿಗೆ ರಾಷ್ಟ್ರಧ್ವಜದ ಬಗ್ಗೆ ಎಷ್ಟು ಗೌರವ ಇದೆ ಎಂಬುವುದಕ್ಕೆ ಕಾಂಗ್ರೆಸ್ ಸರ್ಟಿಫಿಕೇಟ್ ಅಗತ್ಯವಿಲ್ಲ.
ಸಚಿವ ಈಶ್ವರಪ್ಪನವರು ದೆಹಲಿಯ ಕೆಂಪುಕೋಟೆ ಮೇಲೆ ನಾಳೆ ಅಥವಾ ನಾಡಿದ್ದು ಭಾಗವಧ್ವಜ ಹಾರುತ್ತೇ ಎಂದು ಹೇಳಿಲ್ಲ. ಮುಂದೊಂದು ದಿನ ಹಾರಬಹುದು ಎಂದಿದ್ದಾರೆ. ಅದಕ್ಕೆ ನಾನು ಸಹಮತ ವ್ಯಕ್ತಪಡಿಸುತ್ತೇನೆ. ಮುಂದೊಂದು ದಿನ ಕೆಂಪುಕೋಟೆಯಲ್ಲಿ ಭಾಗವಧ್ವಜ ಹಾರಿದರೂ ಅಚ್ಚರಿಯಿಲ್ಲ ಎಂದರು.
ನೂರು ವರ್ಷಗಳ ಹಿಂದೆ ದೇಶ ರಾಷ್ಟ್ರಧ್ವಜ ಹೇಗಿರಬೇಕೆಂದು ಯಾರಿಗೂ ಗೊತ್ತಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಅದಕ್ಕೊಂದು ರೂಪುರೇಷ ಕೊಡಲಾಯಿತು. ಆಗಿನ ಆಯ್ಕೆ ಸಮಿತಿ ರಾಷ್ಟ್ರಧ್ವಜವನ್ನಾಗಿ ಭಾಗಧ್ವಜವನ್ನೇ ಆಯ್ಕೆ ಮಾಡಿತ್ತು. ಇದು ಕಾಂಗ್ರೆಸ್ ಗೆ ಗೊತ್ತಿರಬೇಕು. ಆದರೆ, ಅದನ್ನು ನೆಹರು ಅವರು ಬದಲಾವಣೆ ಮಾಡಿದರು. ಹಾಗಾಗಿ ಬಿಜೆಪಿ ಕಾರ್ಯಕರ್ಯರಿಗೆ ಈಶ್ವರಪ್ಪ ಮಾತಿನ ಬಗ್ಗೆ ಹೆಮ್ಮೆ ಇದೆ. ನಾವು ರಾಷ್ಟ್ರಧ್ವಜ ವಿರೋಧಿಗಳಲ್ಲ. ನಾವು ಅವಮಾನ ಮಾಡಿಲ್ಲ. ಆದರೆ ಹಿಜಾಬ್ ವಿವಾದದಿಂದ ಜನರ ಮನಸನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ರಾಷ್ಟ್ರಧ್ವಜದ ವಿಷಯವನ್ನು ವಿವಾದವಾಗಿಸಿದೆ ಎಂದು ಕಿಡಿಕಾರಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು.
ಬಿಜೆಪಿ ಉಡುಪಿ ನಗರ ಅಧ್ಯಕ್ಷ ಮಹೇಶ್ ಠಾಕೂರ್, ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ರೀಶ ನಾಯಕ್, ಸದಾನಂದ ಉಪ್ಪಿನಕುದ್ರು, ದಾವುದ್ ಅಬೂಬಕ್ಕರ್ ಮೊದಲಾದವರು ಇದ್ದರು.