ಐಸಿಸಿ ಟೆಸ್ಟ್ ಶ್ರೇಯಾಂಕ: ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಕುಸಿತ

ಚೆನ್ನೈ: ಭಾರತ ಚೆನ್ನೈ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 227 ರನ್ ಗಳ ಸೋಲು ಕಂಡ ಬಳಿಕ ಪರಿಷ್ಕೃತ ಐಸಿಸಿ ಟೆಸ್ಟ್ ಶ್ರೇಯಾಂಕ ಫೆ.10 ರಂದು ಪ್ರಕಟವಾಗಿದ್ದು, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಸ್ಥಾನ ಕುಸಿತ ಕಂಡಿದೆ.

ಭಾರತದ ಬೌಲರ್ ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ಜಸ್ಪ್ರಿತ್ ಬುಮ್ರ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಸುಧಾರಣೆ ಕಂಡಿದ್ದಾರೆ.

ಕೊಹ್ಲಿ 5 ನೇ ಸ್ಥಾನದಲ್ಲಿದ್ದರೆ, ಚೇತೇಶ್ವರ್ ಪೂಜಾರಾ 7 ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಭಾರತದ ಬೌಲರ್ ಗಳ ಪೈಕಿ ಅಶ್ವಿನ್ ಹಾಗೂ ಬುಮ್ರಾ ಅವರ ಶ್ರೇಯಾಂಕ ಸುಧಾರಣೆ ಕಂಡಿದ್ದು, ಅನುಕ್ರಮವಾಗಿ 7 ಹಾಗೂ 8 ನೇ ಸ್ಥಾನದಲ್ಲಿದ್ದಾರೆ. ಇಂಗ್ಲೇಂಡ್ ತಂಡದ ನಾಯಕ ಜೋ ರೂಟ್ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ 2 ಸ್ಥಾನಗಳ ಸುಧಾರಣೆ ಕಂಡಿದ್ದು, 3 ನೇ ಸ್ಥಾನದಲ್ಲಿದ್ದಾರೆ.

2017 ರ ನವೆಂಬರ್ ನಿಂದ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿಗಿಂತ ಮುಂದಿರುವ ರೂಟ್, ಕೇನ್ ವಿಲಿಯಮ್ಸನ್ ಗಿಂತ 36 ಪಾಯಿಂಟ್ ಗಳಷ್ಟು ಹಿಂದಿದ್ದಾರೆ. ಸ್ಟೀವ್ ಸ್ಮಿತ್ ಗಿಂತ ಕೇವಲ 8 ಪಾಯಿಂಟ್ ಗಳಷ್ಟು ಮುಂದಿದ್ದಾರೆ. ರಿಷಭ್ ಪತ್ ಬ್ಯಾಟಿಂಗ್ ವಿಭಾಗದಲ್ಲಿ 13 ನೇ ಸ್ಥಾನದಲ್ಲಿ ಮುಂದುವರೆದಿದ್ದರೆ, ವಿಕೆಟ್ ಕೀಪಿಂಗ್ ನಲ್ಲಿ ಸುಧಾರಣೆ ಕಂಡಿದ್ದಾರೆ.

ಶುಭ್ಮನ್ ಗಿಲ್ 7 ಸ್ಥಾನಗಳ ಸುಧಾರಣೆ ಕಂಡಿದ್ದು, 40 ನೇ ಸ್ಥಾನದಲ್ಲಿದ್ದಾರೆ. ವಾಷಿಂಗ್ ಟನ್ ಸುಂದರ್ 81 ನೇ ಸ್ಥಾನದಲ್ಲಿದ್ದರೆ, ಎಡಗೈ ಸ್ಪಿನ್ನರ್ ಶಾಬಾಜ್ ನದೀಮ್ 85 ನೇ ಸ್ಥಾನದಲ್ಲಿದ್ದಾರೆ.