ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಸರಣಿ ಸೋಲು ಅನುಭವಿಸಿದರೂ ತೀರಾ ಕಳಪೆ ಪ್ರದರ್ಶನ ತೋರಿಲ್ಲ. ಇಂದು ಐಸಿಸಿ ಟಿ20 ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತದ ಆಟಗಾರರು ಉತ್ತಮ ಏರಿಕೆ ಕಂಡಿದ್ದಾರೆ.ವಿಂಡೀಸ್ ಸರಣಿಯ ನಂತರ ಬಿಡುಗಡೆಯಾದ ಐಸಿಸಿ ಟಿ20 ಕ್ರಿಕೆಟ್ ಶ್ರೇಯಾಂಕದಲ್ಲಿ ಶುಭ್‌ಮನ್ ಗಿಲ್, ತಿಲಕ್ ವರ್ಮಾ ಮತ್ತು ಜೈಸ್ವಾಲ್ ಉತ್ತಮ ಏರಿಕೆ ಕಂಡಿದ್ದಾರೆ ಅಗ್ರಸ್ಥಾನದಲ್ಲಿದ್ದ ಸೂರ್ಯ ಕುಮಾರ್ ಯಾದವ್ ತಮ್ಮ ಸ್ಥಾನವನ್ನು ಸುಭದ್ರವಾಗಿ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಶುಭ್‌ಮನ್ ಗಿಲ್ 25ನೇ ಶ್ರೇಯಾಂಕಕ್ಕೆ ಏರಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ 4ನೇ ಪಂದ್ಯದಲ್ಲಿ 163ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ 77 ರನ್ ಮತ್ತು ಒಟ್ಟಾರೆ ಸಿರೀಸ್ನಲ್ಲಿ 102 ರನ್ ಕಲೆಹಾಕಿದ ಶುಭ್‌ಮನ್ ಗಿಲ್ ಒಮ್ಮೆಗೆ 43 ಸ್ಥಾನಗಳ ಏರಿಕೆ ಕಂಡಿದ್ದಾರೆ. ಅದರಂತೆ ಪ್ರಸ್ತುತ ಶ್ರೇಯಾಂಕ ಪಟ್ಟಿಯಲ್ಲಿ 25ನೇ ಸ್ಥಾನ ಅಲಂಕರಿಸಿದ್ದಾರೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ಪಾದಾರ್ಪಣೆ ಮಾಡಿ ಗಮನಾರ್ಹ ಪ್ರದರ್ಶನ ನೀಡಿದ ತಿಲಕ್ ವರ್ಮಾ 46ನೇ ಸ್ಥಾನದಲ್ಲಿದ್ದಾರೆ. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ 88ನೇ ಸ್ಥಾನ ಸಿಕ್ಕಿದೆ.
ವಿಂಡೀಸ್ ಸರಣಿಯ ಏಕದಿನ ಪಂದ್ಯದಲ್ಲಿ ಸೂರ್ಯ ಒಳ್ಳೆಯ ಆಟ ಆಡುವಲ್ಲಿ ವಿಫಲವಾದರೂ ಟಿ20ಯಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಮೂರನೇ ಟಿ20 ಪಂದ್ಯದಲ್ಲಿ 44 ಬಾಲ್ನಲ್ಲಿ 88 ರನ್ ಗಳಿಸಿ 188ರ ಸ್ಟ್ರೈಕ್ ರೇಟ್ ಹೊಂದಿದ್ದರು. ಕೊನೆಯ ಪಂದ್ಯದಲ್ಲಿ 45 ಬಾಲ್ಗೆ 61 ರನ್ ಗಳಿಸಿದ್ದರಿಂದ 135 ಸ್ಟ್ರೈಕ್ರೇಟ್ ಹೊಂದಿದ್ದರು. ಐದು ಟಿ20 ಪಂದ್ಯಗಳಲ್ಲಿ ನಾಲ್ಕು ಇನ್ನಿಂಗ್ಸ್ ಆಡಿರುವ ಸೂರ್ಯ ಎರಡು ಅರ್ಧಶತಕ ಗಳಿಸಿದ್ದರು. ಸರಣಿಯಲ್ಲಿ ಒಟ್ಟು 166 ರನ್ ಗಳಿಸಿದ್ದಾರೆ. ಈ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಐಸಿಸಿ ಶ್ರೇಯಾಂಕದಲ್ಲಿ ಒಂದು ಅಂಕ ಏರಿಕೆ ಕಂಡಿದ್ದಾರೆ, ಅಂದರೆ 907 ರೇಟಿಂಗ್ ಅವರಿಗಿದೆ.
ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲಿ ಗಾಯದಿಂದ ಒಂದು ಪಂದ್ಯ ಹೊರಗುಳಿದರೂ ಬಾಕಿ ಪಂದ್ಯಗಳಲ್ಲಿ 6 ವಿಕೆಟ್ ಪಡೆದು ಮಿಂಚಿದ ಕುಲ್ದೀಪ್ ಯಾದವ್ 23 ಸ್ಥಾನಗಳ ಸುಧಾರಿಕೆ ಕಂಡು 28ನೇ ಶ್ರೇಯಂಕವನ್ನು ಪಡೆದುಕೊಂಡಿದ್ದಾರೆ. ಉತ್ತಮ ಬೌಲಿಂಗ್ ಪ್ರರ್ದರ್ಶಿಸಿದ ಅಕೆಲ್ ಹೊಸೈನ್ 11ನೇ ರ್‍ಯಾಂಕಿಂಗ್ ದೊರೆತಿದೆ.
ಐದನೇ ಟಿ20 ಪಂದ್ಯದಲ್ಲಿ 85 ರನ್ ಗಳಿಸಿ ಪರಿಣಾಮಕಾರಿ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಆಟಗಾರ ಬ್ರ್ಯಾಂಡನ್ ಕಿಂಗ್ ತಮ್ಮ ವೃತ್ತಿ ಜೀವನದ ಉತ್ತಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಕಿಂಗ್ಕೊನೆಯ ಇನ್ನಿಂಗ್ಸ್ನ ಪ್ರಭಾವದಿಂದ 13ನೇ ರ್‍ಯಾಂಕಿಂಗ್ ಪಡೆದುಕೊಂಡಿದ್ದಾರೆ. ಇವರು ಸರಣಿಯಲ್ಲಿ ಒಟ್ಟು 173 ರನ್ ಗಳಿಸಿದ್ದಾರೆ. ಸರಣಿಯಲ್ಲಿ 176 ರನ್ ಗಳಿಸಿದ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ 15ನೇ ಶ್ರೇಯಾಂಕದಲ್ಲಿದ್ದಾರೆ.