IC 814 ವೆಬ್ ಸೀರೀಸ್ ವಿವಾದ: ತಪ್ಪನ್ನು ಸರಿಪಡಿಸುವುದಾಗಿ ಭಾರತ ಸರ್ಕಾರಕ್ಕೆ Netflix India ಭರವಸೆ.

ನವದೆಹಲಿ: ಒಟಿಟಿ Netflix India “IC 814 ವೆಬ್ ಸೀರೀಸ್” ನ ಕಂಟೆಂಟ್ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತಪ್ಪನ್ನು ಸರಿಪಡಿಸುವುದಾಗಿ ಭಾರತ ಸರ್ಕಾರಕ್ಕೆ ಭರವಸೆ ನೀಡಿದೆ.

IC-814- ದಿ ಕಂದಹಾರ್ ಹೈಜಾಕ್ ಕುರಿತ ವೆಬ್ ಸೀರೀಸ್ ನಲ್ಲಿ ಹೈಜಾಕ್ ಮಾಡಿದವರನ್ನು ಚಿತ್ರಿಸಿದ ರೀತಿ ವಿವಾದಕ್ಕೀಡಾಗಿರುವ ಹಿನ್ನೆಲೆಯಲ್ಲಿ Netflix India ಮುಖ್ಯಸ್ಥರಿಗೆ ಭಾರತ ಸರ್ಕಾರ ಸಮನ್ಸ್ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ್ದ Netflix India ಮುಖ್ಯಸ್ಥರು ಕಂಟೆಂಟ್ ನ್ನು ಪರಿಷ್ಕರಿಸುವುದಾಗಿ ಹೇಳಿದ್ದು, ದೇಶದ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಕಂಟೆಂಟ್ ಇರಲಿದೆ ಎಂಬ ಭರವಸೆ ನೀಡಿದ್ದಾರೆ.

ಈ ವೆಬ್ ಸೀರೀಸ್ ನ್ನು ಅನುಭವ್ ಸಿನ್ಹಾ ನಿರ್ದೇಶಿಸಿದ್ದಾರೆ. ಆಗಸ್ಟ್ 29 ರಂದು ಬಿಡುಗಡೆಯಾದ ವೆಬ್ ಸೀರೀಸ್ ನಲ್ಲಿ ಅಪಹರಣಕಾರರ ಹೆಸರನ್ನು “ಭೋಲಾ” ಮತ್ತು “ಶಂಕರ್” ಎಂದು ಬದಲಾಯಿಸಲಾಗಿದೆ. ಈ ಹೆಸರುಗಳು ಸಾಂಪ್ರದಾಯಿಕವಾಗಿ ಭಗವಾನ್ ಶಿವನೊಂದಿಗೆ ಸಂಬಂಧಿಸಿದ್ದಾಗಿದೆ.