ಪ್ರತೀಕ್ಷಾ, ಬಿಎ ಪತ್ರಿಕೋದ್ಯಮ ವಿಭಾಗ ಎಂಪಿಎಂ ಕಾಲೇಜು ಕಾರ್ಕಳ
ಅಜ್ಜಿ ಅಂದರೆ ಎಲ್ಲರಿಗೂ ತುಂಬಾ ಇಷ್ಟ. ಅಜ್ಜಿ ಜೊತೆಗಿರುವುದು, ಕಥೆ ಕೇಳುವುದು, ಆಟ ಆಡುವಾಡೋದು ಎಂದರೆ ಸಾಮಾನ್ಯವಾಗಿ ಎಲ್ಲಾ ಮೊಮ್ಮಕ್ಕಳಿಗೂ ತುಂಬಾನೇ ಇಷ್ಟ. ಅಜ್ಜಿ ನೀಡುವ ಪ್ರೀತಿ ನಮಗೆ ಗೊತ್ತು. ಆದರೆ ನಂಗೊಮ್ಮೆ ಸಿಕ್ಕಿದ ಅಪರಿಚಿತ ಅಜ್ಜಿಯು ನೆನೆಪು ಈಗಲೂ ಆಗಾಗ ನನಗೆ ಕಾಡುತ್ತಿರುತ್ತದೆ.
ಪ್ರತಿಯೊಬ್ಬರ ಜೀವನದಲ್ಲೂ ಆಕಸ್ಮಿಕವಾಗಿ ವ್ಯಕ್ತಿಗಳು ಎದುರಾಗುತ್ತಾರೆ, ಹಾಗೆ ಎದುರಾದಾಗ ನಗುಮೊಗದಿಂದಲೇ ಆ ವ್ಯಕ್ತಿಗಳು ಕಾಡಿ ನಮ್ಮ ಜೊತೆಗೆ ಮಾತಾಡಿ ಹೇಗೋ ಪರಿಚಯವಾಗಿಬಿಡುತ್ತಾರೆ. ಅಪರಿಚಿತರಾಗಿದ್ದರೂ ಪರಿಚಿತರಂತೆ ಎಷ್ಟೋ ದಿನಗಳಿಂದ
ಪರಿಚಯವಿರುವಂತೆ ನಮ್ಮೊಂದಿಗೆ ಬೆರೆತು ಮಾತನಾಡುವವರು. ಹಾಗೆ ಮಾತನಾಡುತ್ತಾ ನಮ್ಮಲ್ಲಿ ಒಬ್ಬರಾಗಿ ಬಿಡುತ್ತಾರೆ. ಹಾಗೆ ಒಬ್ಬ ವ್ಯಕ್ತಿ ನಮ್ಮ ಜೊತೆಗೆ ಪರಿಚಿತರಾಗಿಬಿಡುವ ಕ್ಷಣ ತುಂಬಾ ಚೆಂದ.
ಒಮ್ಮೆ ಹೀಗೇ ಆಯಿತು. ನಾನು ಕಾಲೇಜು ಮುಗಿಸಿ ಬಸ್ಸಿನಲ್ಲಿ ಮನೆಗೆ ಹೊರಟಿದ್ದೆ. ನನ್ನ ಪಕ್ಕದ ಸೀಟಿನಲ್ಲಿಯೇ ಒಬ್ಬರು ಅಜ್ಜಿ ಬಂದು ಕುಳಿತರು. ಅವರನ್ನು ನಾನು ಇಲ್ಲಿಯವರೆಗೆ ನೋಡಿರಲಿಲ್ಲ. ಅವರು ನನ್ನ ಪರಿಚಯಚವಿರಲಿಲ್ಲ. ಆದರೆ ಈ ಅಜ್ಜಿಯಂದಿರು ಕೊಡುವ ಪ್ರೀತಿಯಿದೆಯಲ್ಲವೇ ಅದು ಅದ್ಬುತ. ಆ ವಯಸ್ಸಾದ ಅಜ್ಜಿಯೊಳಗೆ ಎಷ್ಟೊಂದು ನೋವು, ಕಷ್ಟಗಳಿತ್ತೋ, ಆದರೂ ಅವರು ನನ್ನೊಂದಿಗೆ ಪ್ರೀತಿಯಿಂದ ಮಾತನಾಡಿದರು.ಅವರು ಮಾತನಾಡುವ ರೀತಿಯೇ ಸ್ಪೂರ್ತಿದಾಯಕವಾಗಿತ್ತು. ಯಾವಾಗಲೂ ವಯಸ್ಸಾದವರು ನಮಗೆ ಜೀವನದ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವವರೇ ಆಗಿರುತ್ತಾರೆ. ಹಾಗೆಯೇ ಈ ಅಜ್ಜಿಯೂ ನನ್ನ ಉಭಯ ಕುಶಲೋಪರಿ ವಿಚಾರಿಸಿದರು. ನಾನು ಅವರ ಸ್ವಂತ ಮೊಮ್ಮಗಳಲ್ಲದಿದ್ದರೂ “ಮೊಮ್ಮಗಳೇ” ಎಂದು ಆ ಅಜ್ಜಿ ಕರೆದದ್ದು ನನ್ನೊಳಗೆ ಪುಳಕವನ್ನುಂಟುಮಾಡಿತು. ನಾನವರ ಮೊಮ್ಮಗಳಾದ ಆ ಕ್ಷಣ ನಿಜಕ್ಕೂ ನನಗೆ ಮರೆಯಲಾಗದ್ದು.ಆಗ ನನಗಾದ ಖುಷಿಯನ್ನು ವಿವರಿಸಲು ಸಾಧ್ಯವಿಲ್ಲ.
ಜೀವನದ ದಾರಿಯಲ್ಲಿ ಅಪರಿಚಿತ ವ್ಯಕ್ತಿಯ ಮುಖಾಮುಖಿ ಆಗುವುದು ಸಹಜ ಎಂದೇ ಹೇಳಬಹುದು. ಆದರೆ ಹೀಗೆ ಸಿಕ್ಕಂತಹ ಎಲ್ಲಾ ಅಪರಿಚಿತ ವ್ಯಕ್ತಿಯು ನೆನಪಿನಲ್ಲಿ ಇರುವುದಿಲ್ಲ, ಆಪ್ತರಾಗುವುದಿಲ್ಲ, ಆದರೆ ಕೆಲವರು ಮಾತ್ರ ಹಾಗೆಯೇ ನೆನಪಿನಲ್ಲಿ ಉಳಿದುಬಿಡುತ್ತಾರೆ, ಆಗಾಗ ಕಾಡುತ್ತಾರೆ. ನಮ್ಮ ಜೊತೆಯಲ್ಲಿ ಇರುವವರೇ ನಮ್ಮನ್ನು ಮರೆತುಬಿಡುವ ಈ ಪ್ರಪಂಚದಲ್ಲಿ ಪರಿಚಯವಿರದ ವ್ಯಕ್ತಿಯು ನೆನಪಿನಲ್ಲೇ ಇರುವವುದು ಖುಷಿ ಹುಟ್ಟಿಸುತ್ತದೆ.ನನಗೆ ಸಿಕ್ಕ ಅಜ್ಜಿಯು ಎಂದೆಂದಿಗೂ ನನ್ನ ಜೀವನದಲ್ಲಿ ಪರಿಚಿತ ವ್ಯಕ್ತಿಯೇ ಆಗಿರುತ್ತಾರೆ. ಅಜ್ಜಿ ಜೊತೆ ಕಳೆದ ಕ್ಷಣ, ಅವರ ಜೊತೆ ಮಾತಾಡಿದ ಕ್ಷಣ ಎಂದೆಂದಿಗೂ ಚಂದದ ನೆನಪುಗಳೇ. ಆ ಅಜ್ಜಿಯು ಬಸ್ಸಿಂದ ಇಳಿದಾಗ ಜೀವನಕ್ಕೆ ತುಂಬಾ ಬೇಕಾದ ವ್ಯಕ್ತಿಯೊಬ್ಬರು ನನ್ನಿಂದ ದೂರವಾದ ಹಾಗೇ ಅನ್ನಿಸಿ ಬೇಸರಾವಾಯಿತು. ಆದರೆ ಈಗ ಅಜ್ಜಿ ಜೊತೆ ಕಳೆದ ಆ ಕ್ಷಣ ನೆನೆಪಿಸಿಕೊಂಡರೆ ನಿಜಕ್ಕೂ ನನಗೆ ಸ್ಪೂರ್ತಿ ತುಂಬಿ ಬರುತ್ತದೆ.
♥ಪ್ರತೀಕ್ಷಾ