ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಕ್ಕೆ ಬೇಸರವಿಲ್ಲ- ಆದರೆ ಪಕ್ಷ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಿದೆ- ಬಿ.ಎಂ.ಸುಕುಮಾರ್ ಶೆಟ್ಟಿ

ಕುಂದಾಪುರ: ಈ ಬಾರಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡದಕ್ಕೆ ಬೇಸರವಿಲ್ಲ. ಮಾಡಿದ ಕೆಲಸಕ್ಕೆ ತೃಪ್ತಿಯಿದೆ. ಆದರೆ,ಟಿಕೆಟ್ ವಿಚಾರದಲ್ಲಿ ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ಹೊರ ಹಾಕಿದರು.

ಟಿಕೆಟ್ ನೀಡದ ಬಗ್ಗೆ ಮೊದಲೇ ತಿಳಿಸಬಹುದಿತ್ತು. ನಾನು ಬೆಂಬಲ ನೀಡುವ ಬಗ್ಗೆ ಕಾರ್ಯಕರ್ತರು, ಹಿತೈಷಿಗಳ ಜತೆಗೆ ಚರ್ಚಿಸಿ ಇನ್ನೆರಡು ದಿನದಲ್ಲಿ ನನ್ನ ನಿಲುವು ಏನು ಎಂಬುದನ್ನು ತಿಳಿಸುತ್ತೇನೆ. ಬಿಜೆಪಿಯಲ್ಲಿಯೇ ಇರುತ್ತೇನೆ ಇದರಲ್ಲಿ ಸಂಶಯವೇ ಬೇಡ ಎಂದು ತಿಳಿಸಿದರು.

ಈಗಿನ ಬಿಜೆಪಿ ಅಭ್ಯರ್ಥಿ ಕ್ಷೇತ್ರದಿಂದ ದೂರ ಇದ್ದು 6 ವರ್ಷಗಳಾಗಿವೆ, ಅವರನ್ನು ಅಂದಿನಿಂದ ನೋಡಿಲ್ಲ. ನಾನು ಸೋತ 2013 ರ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಈ ಬಾರಿ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಇಲ್ಲ ಅನ್ನುವುದನ್ನು 3 ತಿಂಗಳು ಮೊದಲೇ ಹೇಳಬಹುದಿತ್ತು. ನಡ್ಡಾ, ಸಿಎಂ ಕಾರ್ಯುಕ್ರಮಕ್ಕೆ ಸಹಸ್ರಾರು ಮಂದಿ ಸೇರಿಸಿದ್ದೇನೆ. ಜನ ಸೇರಿಸುವ ಕೆಲಸ ಅಷ್ಟು ಸುಲಭವಲ್ಲ ಎಂದು ತಿಳಿಸಿದರು. ಮಾಜಿ ಸಿಎಂ, ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಕರೆ ಮಾಡಿ ಪಕ್ಷಕ್ಕೆ ಬನ್ನಿ ಎಂದಿದ್ದರು. ಆದರೆ ನಾನು ಬರುವುದಿಲ್ಲ ಅಂದಿದ್ದೇನೆ. ಬಿಎಸ್‌ವೈ ಹಾಗೂ ಸಿಎಂ ಬೊಮ್ಮಾಯಿ ಕರೆ ಮಾಡಿ, ನಾವು ನಿಮ್ಮೊಂದಿಗಿದ್ದೇವೆ. ಟಿಕೆಟಿಗಾಗಿ ನಾವು ಪ್ರಯತ್ನಿಸಿದ್ದು, ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ತಿಳಿಸಿದ್ದಾರೆ ಎಂದರು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಅಭಿಪ್ರಾಯ ಕ್ಷೇತ್ರದಲ್ಲಿ ಇತ್ತು. ಗೆಲ್ಲುವ ವಿಶ್ವಾಸವೂ ಇತ್ತು. ಮತ್ತೊಂದು ಬಾರಿಗೆ ಶಾಸಕರಾಗುವ ಭಾವನೆ ಎಲ್ಲರಲ್ಲಿತ್ತು. ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಘೋಷಿಸಿದೆಯೋ, ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ನೆಂಪುವಿನ ಸುಕುಮಾರ ಶೆಟ್ಟಿಯವರ ಮನೆಯೆದರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶಾಸಕರ ಪರವಾಗಿ ಘೋಷಣೆ ಕೂಗಿದರು. ಹೈಕಮಾಂಡ್, ಸಂಘ ಪರಿವಾರ ಹಾಗೂ ಪಕ್ಷದ ವರಿಷ್ಟರ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಮನೆಗೆ ತೆರಳಿ ಮತ ಬೇಡುವುದು ನಾವು. ಟಿಕೆಟ್ ಅಂತಿಮ ಮಾಡೋದು ಯಾರೋ ಆಗಿದ್ದಾರೆ. ಎರಡು ದಿನದಲ್ಲಿ ಜಿಲ್ಲಾಧ್ಯಕ್ಷರು, ರಾಜ್ಯ ನಾಯಕರು, ಕ್ಷೇತ್ರದ ಸಂಸದರು ಆಗಮಿಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯದಿದ್ದರೆ ಚುನಾವಣೆಯಲ್ಲಿ ಕೆಲಸ ಮಾಡಲ್ಲ ಎಂದು ಕೆಲ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಪಕ್ಷದ ಪ್ರಮುಖರಾದ ಪ್ರಿಯದರ್ಶಿನಿ ದೇವಾಡಿಗ, ಮಾಲತಿ ನಾಯ್ಕ್, ಪ್ರಕಾಶ್ ಪೂಜಾರಿ ಜೆಡ್ಡು, ಹರ್ಕೂರು ಮಂಜಯ್ಯ ಶೆಟ್ಟಿ, ಆನಂದ ಖಾರ್ವಿ ಉಪ್ಪುಂದ, ಶರತ್ ಶೆಟ್ಟಿ ಉಪ್ಪುಂದ ಇದ್ದರು