“ನಂಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದೇನೆ” ಅಭಿಮಾನಿಗಳಿಗೆ ಸ್ಪಷ್ಟನೆ ಕೊಟ್ಟ ಬಿಗ್ ಬಿ! ವದಂತಿಗಳಿಗೆ ಕಂಗಾಲಾಗಿದ್ದವರು ಈಗ ಖುಷ್

ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಸ್ವತಃ ಬಿಗ್ ಬಿ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಆಸ್ಪತ್ರೆ, ಶಸ್ತ್ರಚಿಕಿತ್ಸೆ ಹಾಗೂ ಐಸಿಯು ಕುರಿತು ಅವರು ಬರೆದಿದ್ದ ಬ್ಲಾಗ್‌ ಪೋಸ್ಟ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ, ಅದು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಬರಹವಲ್ಲ ಎಂದು ಅಮಿತಾಬ್ ತಿಳಿಸಿದ್ದಾರೆ.

ಇತ್ತೀಚೆಗೆ ಪ್ರಕಟಿಸಿದ್ದ ಬ್ಲಾಗ್‌ನಲ್ಲಿ ಆಸ್ಪತ್ರೆ, ಶಸ್ತ್ರಚಿಕಿತ್ಸೆ, ಐಸಿಯು ಹಾಗೂ ಚೇತರಿಕೆ ಕುರಿತು ಉಲ್ಲೇಖಿಸಿದ್ದರಿಂದ ಅಮಿತಾಬ್ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತಾಬ್ ಬಚ್ಚನ್, “ನಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ನನ್ನ ಬ್ಲಾಗ್‌ನಲ್ಲಿ ನನ್ನ ಆರೋಗ್ಯದ ಬಗ್ಗೆ ಬರೆದಿಲ್ಲ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಯೊಬ್ಬರು ಎದುರಿಸುವ ಪರಿಸ್ಥಿತಿಯನ್ನು ಉದಾಹರಣೆಯಾಗಿ ವಿವರಿಸಿದ್ದೆ. ಅದನ್ನು ನನ್ನ ಆರೋಗ್ಯಕ್ಕೆ ಸಂಬಂಧಿಸಿ ಹಲವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಚಾಂಪಿಯನ್ ಒಬ್ಬ ಸೋಲಿನ ಬಳಿಕ ಮತ್ತೆ ಹೇಗೆ ಎದ್ದು ನಿಲ್ಲುತ್ತಾನೆ ಎಂಬುದನ್ನು ವಿವರಿಸಲು ಆ ಉದಾಹರಣೆಯನ್ನು ಬಳಸಿದ್ದಾಗಿ ಅವರು ತಿಳಿಸಿದ್ದಾರೆ. ದೇಹಕ್ಕೆ ಗಾಯವಾದರೂ ಕಾಲಕ್ರಮೇಣ ಅದು ಗುಣಮುಖವಾಗುವಂತೆ, ಜೀವನದಲ್ಲಿಯೂ ಕಷ್ಟಗಳನ್ನು ಮೀರಿ ಮುಂದೆ ಸಾಗಬೇಕು ಎಂಬ ಸಂದೇಶ ನೀಡುವ ಉದ್ದೇಶದಿಂದ ಆ ಬರಹವನ್ನು ಬರೆದಿದ್ದಾಗಿ ಹೇಳಿದ್ದಾರೆ.

ತಮ್ಮ ಬ್ಲಾಗ್‌ನ ಕೊನೆಯಲ್ಲಿ “ಜೀವನದಲ್ಲಿ ಕಲಿಯುವುದಕ್ಕೆ ಅಂತ್ಯವೇ ಇಲ್ಲ” ಎಂದು ಬರೆದಿರುವ ಅಮಿತಾಬ್ ಬಚ್ಚನ್, ತಮ್ಮ ಆರೋಗ್ಯ ಸಂಪೂರ್ಣ ಚೆನ್ನಾಗಿದ್ದು ಅಭಿಮಾನಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.