ಭಾರತದ ಹೈದರಾಬಾದಿಗೆ ‘ವಿಶ್ವ ಹಸಿರು ನಗರ ಪ್ರಶಸ್ತಿ 2022’ ಯ ಗರಿ

ದಕ್ಷಿಣ ಕೊರಿಯಾ: ಶುಕ್ರವಾರ ಜೆಜುನಲ್ಲಿ ನಡೆದ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಹಾರ್ಟಿಕಲ್ಚರ್ ಪ್ರೊಡ್ಯೂಸರ್ಸ್ (ಎಐಪಿಎಚ್) ವಿಶ್ವ ಹಸಿರು ನಗರ ಪ್ರಶಸ್ತಿಗಳು 2022 ರಲ್ಲಿ ತೆಲಂಗಾಣದ ಹೈದರಾಬಾದ್ ನಗರವು ಒಟ್ಟಾರೆಯಾಗಿ ‘ವಿಶ್ವ ಹಸಿರು ನಗರ ಪ್ರಶಸ್ತಿ 2022’ ಮತ್ತು ‘ಆರ್ಥಿಕ ಪುನಶ್ಚೇತನ ಮತ್ತು ಅಂತರ್ಗತ ಬೆಳವಣಿಗೆಗಾಗಿ ಹಸಿರು ಬದುಕು’ ಪ್ರಶಸ್ತಿಯನ್ನು ಗೆದ್ದಿದೆ.

ಪ್ಯಾರಿಸ್, ಮೆಕ್ಸಿಕೋ ಸಿಟಿ, ಮಾಂಟ್ರಿಯಲ್, ಫೋರ್ಟಲೆಜಾ ಮತ್ತು ಬೊಗೋಟಾದಂತಹ ನಗರಗಳನ್ನು ಸೋಲಿಸಿದ ಭಾರತದ ಹೈದರಾಬಾದ್ ವಿಜೇತನಾಗಿ ಹೊರಹೊಮ್ಮಿದೆ. ಎಲ್ಲಾ ಆರು ವಿಭಾಗಗಳಲ್ಲಿ ಅತ್ಯುತ್ತಮವೆನಿಸಿಕೊಂಡ ಹೈದರಾಬಾದ್ ನಗರ ಒಟ್ಟಾರೆ ‘ವಿಶ್ವ ಹಸಿರು ನಗರ 2022’ ಪ್ರಶಸ್ತಿಯನ್ನು ಗೆದ್ದಿದೆ. ಹೈದರಾಬಾದ್ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಗೆದ್ದ ಏಕೈಕ ಭಾರತೀಯ ನಗರವಾಗಿದೆ.

Image

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ , ರಾಜ್ಯ ಸರ್ಕಾರವು ಹರಿತಹಾರಂ ಮತ್ತು ನಗರಾಭಿವೃದ್ಧಿ ಕಾರ್ಯಕ್ರಮಗಳನ್ನು ಬಲವಾಗಿ ಜಾರಿಗೊಳಿಸುತ್ತಿದೆ. ದೇಶಕ್ಕೆ ಹಸಿರು ಫಲವನ್ನು ನೀಡುತ್ತಿದೆ ಎಂಬುದಕ್ಕೆ ಈ ಅಂತರರಾಷ್ಟ್ರೀಯ ಪ್ರಶಸ್ತಿಗಳು ಪುರಾವೆಗಳಾಗಿವೆ. ಈ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾರತದಿಂದ ಆಯ್ಕೆಯಾದ ಏಕೈಕ ನಗರ ಹೈದರಾಬಾದ್ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ಹಸಿರು ತೆಲಂಗಾಣ ರಚನೆಯ ನಿಟ್ಟಿನಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಠಿಣ ಪರಿಶ್ರಮವನ್ನು ಮುಂದುವರಿಸಲು ಕರೆ ನೀಡಿದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಪ್ರಯತ್ನಗಳು ಮತ್ತು ಅದರ ಪರಿಸರ ಪರ ನೀತಿಗಳು ಇಡೀ ಜಗತ್ತು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

‘ಆರ್ಥಿಕ ಚೇತರಿಕೆ ಮತ್ತು ಅಂತರ್ಗತ ಬೆಳವಣಿಗೆಗಾಗಿ ಹಸಿರು ಬದುಕು’ ವಿಭಾಗದಲ್ಲಿ, ಹೊರ ವರ್ತುಲ ರಸ್ತೆಯ ಹಸಿರೀಕರಣವನ್ನು ಹೈದರಾಬಾದ್‌ ಕಡೆಯಿಂದ ಸಲ್ಲಿಸಲಾಗಿತ್ತು. ಈ ವರ್ಗವು ನಗರದ ಎಲ್ಲಾ ನಿವಾಸಿಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ವ್ಯವಸ್ಥೆಗಳು ಮತ್ತು ಪರಿಹಾರಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಈ ವರ್ಗದಲ್ಲಿ ‘ತೆಲಂಗಾಣ ರಾಜ್ಯಕ್ಕೆ ಹಸಿರು ಹಾರ’ ಅತ್ಯುತ್ತಮವಾಗಿತ್ತೆಂದು ಒ.ಆರ್.ಆರ್ ನಿಂದ ಪರಿಗಣಿಸಲ್ಪಟ್ಟಿದೆ.