ಹೈದರಾಬಾದ್: ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಚುನಾವಣೆಯ ಮತ ಎಣಿಕೆಯ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗಿದೆ.
150 ಸದಸ್ಯ ಬಲದ ಪಾಲಿಕೆಯಲ್ಲಿ ಕಳೆದ ಬಾರಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಿ ಹಿಡಿದಿದ್ದ ಆಡಳಿತಾರೂಢ ಟಿಆರ್ಎಸ್ ಪಕ್ಷವು 55 ಸ್ಥಾನಕ್ಕೆ ಕುಸಿದಿದೆ.
ಅಚ್ಚರಿ ಎಂಬಂತೆ ಕಳೆದ ಬಾರಿ ಕೇವಲ ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಉತ್ತಮ ಸಾಧನೆ ಮಾಡಿದ್ದು, 50 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಪಾಲಿಕೆ ಚುಕ್ಕಾಣಿ ಹಿಡಿಯುವ ಬಿಜೆಪಿ ಕನಸು ಮಾತ್ರ ಈಡೇರಿಲ್ಲ.
ಟಿಆರ್ಎಸ್ 55 ವಾರ್ಡ್ಗಳಲ್ಲಿ ಮತ್ತು ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ 43 ವಾರ್ಡ್ಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ 50 ವಾರ್ಡ್ಗಳಲ್ಲಿ ಹಾಗೂ ಕಾಂಗ್ರೆಸ್ 2 ವಾರ್ಡ್ನಲ್ಲಿ ಗೆಲುವು ಪಡೆದಿದೆ.
ಈ ಮೂಲಕ ಬಿಜೆಪಿ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಈ ಸಾಧನೆಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಎಐಎಂಐಎಂ 3ನೇ ಸ್ಥಾನಕ್ಕೆ ತಳ್ಳಲು ಪಟ್ಟಿದೆ.
ಮಂಗಳವಾರ ನಡೆದ ಪಾಲಿಕೆ ಚುನಾವಣೆಯಲ್ಲಿ ಮತದಾನಕ್ಕೆ ಬ್ಯಾಲೆಟ್ ಪೇಪರ್ (ಮತಪತ್ರ) ಬಳಕೆ ಮಾಡಲಾಗಿತ್ತು. ಟಿಆರ್ಎಸ್ ಎಲ್ಲ 150 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿ 149 ವಾರ್ಡ್ಗಳಲ್ಲಿ, ಕಾಂಗ್ರೆಸ್ 146, ಎಐಎಂಐಎಂ 51 ಹಾಗೂ ಟಿಡಿಪಿ 106 ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು