ಕೋಲಾರ: ಪತ್ನಿಯ ಜೊತೆ ಅತಿಯಾದ ಸಾಮೀಪ್ಯ ಆರೋಪ; ವ್ಯಕ್ತಿಯ ಕತ್ತು ಸೀಳಿದ ಪತಿ

ಕೋಲಾರ: ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬ ಜೂನ್ 19 ರಂದು ತನ್ನ ಹೆಂಡತಿಯ ಜೊತೆ ಫೋನ್ ನಲ್ಲಿ ವಿಪರೀತ ಮಾತನಾಡುತ್ತಿದ್ದ ಎನ್ನಲಾದ ವ್ಯಕ್ತಿಯ ಕತ್ತು ಸೀಳಿ ಆತನ ರಕ್ತವನ್ನು ಕುಡಿದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ಸೋದರ ಸಂಬಂಧಿ ಸೆರೆಹಿಡಿದಿದ್ದು ಇದರ ವೀಡಿಯೊ ವೈರಲ್ ಆಗಿದೆ.

ಮಂಡ್ಯಪೇಟೆಯ ವ್ಯಾಪಾರಿ ವಿಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಗ್ರಾಮದವನೇ ಆಗಿರುವ 30 ವರ್ಷದ ಮಾರೇಶ್ ಎಂಬಾತನನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಆತನನ್ನು ಬಂಧಿಸಿದ್ದಾರೆ. ಘಟನೆಯನ್ನು ಚಿತ್ರೀಕರಿಸಿದ ವಿಜಯ್ ಸೋದರ ಸಂಬಂಧಿ ಜಾನ್ ಬಾಬುಗಾಗಿ ಹುಡುಕಾಟ ನಡೆಸಿದ್ದಾರೆ.

ಮಾರೇಶ್ ಮತ್ತು ತನ್ನ ಹೆಂಡತಿಯ ನಡುವೆ ಬೆಳೆಯುತ್ತಿದ್ದ ಸಾಮೀಪ್ಯದ ಮೇಲಿನ ತೀವ್ರ ಕೋಪದಿಂದ ವಿಜಯ್‌ ಈ ಅಮಾನವೀಯ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 19 ರಂದು ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಘಟನೆ ನಡೆದಿದ್ದು, ವಿಜಯ್ ಸೋದರ ಸಂಬಂಧಿ ಈ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ವಿಜಯ್ ಸಣ್ಣ ಚಾಕು ಬಳಸಿದ್ದರಿಂದ ಮಾರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಾರೇಶ್ ಮತ್ತು ವಿಜಯ್ ಪತ್ನಿ ನಿರಂತರವಾಗಿ ಫೋನ್ ಮೂಲಕ ಸಂವಹನ ನಡೆಸುತ್ತಿದ್ದರು ಮತ್ತು ಇದು ವಿಜಯ್ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶ ಮೂಲದ ವಿಜಯ್ ಮತ್ತು ಕುಟುಂಬ 30 ವರ್ಷಗಳ ಹಿಂದೆ ಚಿಂತಾಮಣಿಯಲ್ಲಿ ನೆಲೆಸಿತ್ತು. ಕುಟುಂಬವು ಮಂಡ್ಯಪೇಟೆಯಲ್ಲಿ ವಾಸವಾಗಿದ್ದು, ಖಾದ್ಯ ತೈಲ, ಬಟ್ಟೆ, ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಂತೆ ವಿವಿಧ ಸರಕುಗಳನ್ನು ಮಾರಾಟ ಮಾಡುತ್ತಿದ್ದರು. ಮಾರೇಶ್ ಟಾಟಾ ಏಸ್ ಹೊಂದಿದ್ದು, ಸರಕು ಸಾಗಿಸಲು ವಿಜಯ್ ಅದನ್ನು ಬಾಡಿಗೆಗೆ ಪಡೆಯುತ್ತಿದ್ದ. ಈ ಮಧ್ಯೆ ವಿಜಯ್ ಪತ್ನಿ ಮತ್ತು ಮಾರೇಶ್ ಮಧ್ಯೆ ಸ್ನೇಹ ಬೆಳೆದಿದ್ದು, ಇವರಿಬ್ಬರೂ ಫೋನಿನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು ಎನ್ನಲಾಗಿದೆ.

ತನ್ನ ಹೆಂಡತಿ ಜೊತೆ ಮಾತನಾಡದಂತೆ ಎಚ್ಚರಿಕೆ ನೀಡುತ್ತಿದ್ದರೂ ಮಾರೇಶ ತನ್ನ ಸ್ವಭಾವದಲ್ಲಿ ಬದಲಾವಣೆ ಮಾಡದೆ ತನ್ನ ಚಾಳಿಯನ್ನು ಮುಂದುವರಿಸಿದ್ದೇ ವಿಜಯ್ ಕೋಪಕ್ಕೆ ಕಾರಣ ಎನ್ನಲಾಗಿದೆ. ಜೂನ್ 19 ರಂದು ಟೊಮೇಟೋ ಸಾಗಾಟ ಮಾಡುವ ನೆಪವೊಡ್ಡಿ ಮಾರೇಶ್ ನನ್ನು ಕರೆಸಿಕೊಂಡು ವಿಜಯ್ ಮತ್ತು ಬಾಬು ತಮ್ಮ ಬೈಕಿನಲ್ಲಿ ಏಕಾಂತ ಸ್ಥಳವೊಂದಕ್ಕೆ ಕರೆದುಕೊಂಡು ಹೋಗಿ ಕೃತ್ಯವೆಸಗಿ ಪರಾರಿಯಾಗಿದ್ದಾರೆ.

ಮಾರೇಶ್‌ಗೆ ಸಕಾಲದಲ್ಲಿ ವೈದ್ಯಕೀಯ ನೆರವು ದೊರೆತು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಾರೇಶ್ ಪೊಲೀಸ್ ದೂರು ದಾಖಲಿಸುವುದನ್ನು ತಪ್ಪಿಸಿದರೂ, ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.